ಶ್ರೀರಂಗಪಟ್ಟಣದ ಗಂಜಾಂನ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಆರ್.ಆದರ್ಶ ಸಸಿ ನೆಟ್ಟು ನೀರೆರೆದರು. ಮ್ಯಾನೆಜಿಂಗ್ ಟ್ರಸ್ಟಿ ಎಸ್.ಪಿ.ನಮ್ರತಾ, ಆಡಳಿತಾಧಿಕಾರಿ ಭಾನುಪ್ರಿಯ, ಶಿಕ್ಷಣ ಸಂಯೋಜಕ ಸಿದ್ದಲಿಂಗು, ಪ್ರಾಂಶುಪಾಲ ರಾಘವೇಂದ್ರ, ಮುಖ್ಯಶಿಕ್ಷಕಿ ಸ್ಪಂದನಾ ಇದ್ದರು.
ಶ್ರೀರಂಗಪಟ್ಟಣ: ಆಧುಕನಿಕತೆ ಹಾಗೂ ಆವಿಷ್ಕಾರದ ಪೀಳಿಗೆಯ ಜನಾಂಗಕ್ಕೆ ಪ್ಲಾಸ್ಟಿಕ್ ಬಳಕೆ ತ್ಯಜಿಸಿ ಮತ್ತೊಮ್ಮೆ ಹಸಿರು ಕ್ರಾಂತಿ ಮೂಡಿಸುವ ಅಗತ್ಯ ಎದುರಾಗಿದೆ ಎಂದು ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಆದರ್ಶ ತಿಳಿಸಿದರು.
ಪಟ್ಟಣದ ಗಂಜಾಂನ ಚಂದಗಾಲ ರಸ್ತೆಯ ರಿವರ್ ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರೆರೆದ ಬಳಿಕ ಅವರು ಮಾತನಾಡಿದರು.
ಈ ಹಿಂದೆ ನಾವು ಪಡೆಯುತ್ತಿದ್ದ ಶುದ್ಧ ಗಾಳಿ, ನೀರು, ಕಾಣುತ್ತಿದ್ದ ವಾತಾವರಣ ಮಾಲಿನ್ಯತೆಯಿಂದ ವಿಷಯುಕ್ತಗೊಳ್ಳುತ್ತಿದೆ. ಇದಕ್ಕೆ ಶಿಕ್ಷಣ ಪಡೆದ ನಾಗರಿಕರೇ ಕಾರಣ.
ಪ್ರತಿವರ್ಷ, ಪ್ರತಿ ದಿನ, ಪ್ರತಿ ಕ್ಷಣ ಪರಿಸರದಲ್ಲಿ ಮಾಲಿನ್ಯತೆ ಹೆಚ್ಚಾಗಿ ಜೀವಸಂಕುಲದ ಆರೋಗ್ಯ ಹದಗೆಡುತ್ತಿದ್ದರೂ ನಾವು ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ ಸಂಗತಿ. ಹೀಗಾಗಿ ಪ್ಲಾಸ್ಟಿಕ್, ಪರಿಸರಕ್ಕೆ ಮಾರಕವಾದ ತ್ಯಾಜ್ಯಗಳು ಮತ್ತು ರಾಸಾಯನಿಕ ಪದಾರ್ಥಗಳ ಬಳಕೆ ತ್ಯಜಿಸಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಅವಶ್ಯಕತೆಗಷ್ಟೇ ಬಳಸಿ ಪರಿಣಾಮಕಾರಿಯಾಗಿ ರಕ್ಷಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಯುವ ಸಮೂಹ ಆಸಕ್ತಿ ತೋರಿ ಜಾಗೃತಿ ಮೂಡಿಸುವ ಜತೆಗೆ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಈ ಕಾರಣಕ್ಕಾಗಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದಲೇ ಸಸಿಗಳ ನೆಟ್ಟು ನೀರುಣಿಸಿ ಪೋಷಿಸುವ ಹಸಿರು ಶಿಕ್ಷಣ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಎಸ್.ಪಿ.ನಮ್ರತಾ, ಆಡಳಿತಾಧಿಕಾರಿ ಭಾನುಪ್ರಿಯ, ಶಿಕ್ಷಣ ಸಂಯೋಜಕ ಸಿದ್ದಲಿಂಗು, ಪ್ರಾಂಶುಪಾಲ ರಾಘವೇಂದ್ರ, ಮುಖ್ಯಶಿಕ್ಷಕಿ ಸ್ಪಂದನಾ ಇತರರಿದ್ದರು.