ಕೊಳ್ಳುವವರೇ ಇಲ್ಲದಿದ್ದರೆ ಪ್ರಕಟಣೆ ಹೇಗೆ ಸಾಧ್ಯ?: ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಬೇಸರ

ಮಂಡ್ಯದಲ್ಲಿ ಆಯೋಜಿಸಿದ್ದ ಜಾನಪದ ಸಂಶೋಧನಾ ಗ್ರಂಥವನ್ನು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಬಿಡುಗಡೆ ಮಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಜಾನಪದ ಸಂಶೋಧನಾ ಗ್ರಂಥವನ್ನು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಬಿಡುಗಡೆ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಜಾನಪದ ಸಂಶೋಧನಾ ಗ್ರಂಥ ಬಿಡುಗಡೆ
  • ಕರ್ನಾಟಕ ಸಂಘದಿಂದ ಆಯೋಜನೆ
ಮಂಡ್ಯ: ಪುಸ್ತಕಗಳನ್ನು ಖರೀದಿ ಮಾಡುವವರೇ ಇಲ್ಲದೇ ಹೋದರೆ ಪ್ರಕಟಣೆ ಹಾಗೂ ಬೆಳವಣಿಗೆ ಹೇಗೆ ಸಾಧ್ಯ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಪ್ರಶ್ನಿಸಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಾಧ್ಯಾಪಕಿ ಪ್ರೊ.ಕೆಂಪಮ್ಮ ಅವರ ಮಂಡ್ಯ ಜಿಲ್ಲೆಯ ಆಚರಣಾತ್ಮಕ ಜಾನಪದ ಸಂಶೋಧನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಅವರು, ಲಕ್ಷಾಂತರ ರೂಪಾಯಿ ವೇತನ ಪಡೆಯುವ ಸರ್ಕಾರಿ ಉಪನ್ಯಾಸಕರು ಪುಸ್ತಕವನ್ನು ಖರೀದಿಸುತ್ತಿಲ್ಲ. ಕೇರಳದಲ್ಲಿ ಜಾನಪದದಂತಹ ಪುಸ್ತಕಗಳು ಪ್ರಕಟವಾದರೆ ಕಡಿಮೆ ಅವಧಿಯಲ್ಲಿಯೇ 2 ಸಾವಿರ ಪುಸ್ತಕಗಳು ಮಾರಾಟವಾಗುತ್ತವೆ. ಒಂದು ಸಾವಿರ ಸರ್ಕಾರ ಖರೀದಿಸಿದರೆ, ಓದುಗರಿಂದ ಒಂದು ಸಾವಿರ ಖರೀದಿಯಾಗುತ್ತವೆ. ಮಲಯಾಳಂ ಭಾಷೆಯಲ್ಲಿ ಕೃತಿಗಳು ಮಾರಾಟವಾಗುವ ಹಾಗೆ ನಮ್ಮ ಕರ್ನಾಟಕದಲ್ಲಿ ಕನ್ನಡ ಪುಸ್ತಕಗಳು ಏಕೆ ಮಾರಾಟವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪುಸ್ತಕಗಳನ್ನು ರಾಶಿರಾಶಿ ಸಂಗ್ರಹ ಇಟ್ಟುಕೊಂಡು ಗ್ರಂಥಾಲಯಕ್ಕೆ ಆದೇಶ ಬಂದಿಲ್ಲ ಎನ್ನುವ ಕೂಗು ಕೇಳುತ್ತಿದೆ, ಅದನ್ನು ನೋಡಿದ್ದೇನೆ. ಪ್ರೊ.ಕೆಂಪಮ್ಮ ಅವರು ಸದಾಭಿರುಚಿ ಇರುವ ಹಾಗೂ ಗ್ರಾಮೀಣ ಸಂಸ್ಕೃತಿ ಗೌರವಿಸುವ ಜಾನಪದ ಹಾಡುಗಾರ್ತಿ. ಇದರ ಜತೆಗೆ ಉತ್ತಮ ಉಪನ್ಯಾಸಕರೆನ್ನುವ ಹೆಸರು ಪಡೆದಿದ್ದಾರೆ. ಉತ್ತಮ ಪುಸ್ತಕವನ್ನು ಬರೆದಿದ್ದಾರೆ. ಇತ್ತೀಚೆಗೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಪುಸ್ತಕ ಓದುವುದನ್ನು ಬಿಟ್ಟಿದ್ದಾರೆ. ಹೀಗಾದರೆ ಬರವಣಿಗೆ ಎಲ್ಲಿ ಬರುತ್ತದೆ. ಇವರಿಗೆ ಮೊಬೈಲ್ ಸರ್ವಸ್ವ ಆಗಿ ಬಿಟ್ಟಿದೆ ಎಂದರು.
ಚರಿತ್ರಾಗಾರರು ಜನಸಾಮಾನ್ಯರ ಚರಿತ್ರೆಯನ್ನು ಬರೆಯಲೇ ಇಲ್ಲ. ಆಳುವ ವರ್ಗದ ಅಥವಾ ಪರೋಹಿತ ವರ್ಗದ ಒಂದು ಬಗೆಯ ಜನರ ನಾಡಿನ ಹಾಗೂ ದೇಶದ ಚರಿತ್ರೆ ಎಂದು ಹೇಳಿಬಿಟ್ಟರು. ವಿಸ್ತಾರವಾದ ಹಂಪಿಯಲ್ಲಿ ಸಾವಿರಾರು ಕಟ್ಟಡಗಳಿವೆ. ಅಂತಹ ಕಲ್ಲಿನ ಕಟ್ಟಡ ಶ್ರಮಿಕರ ಹೆಸರನ್ನೋ ಅಥವಾ ಶಿಲ್ಪಿಯ ಹೆಸರನ್ನೋ ಬರೆದಿಲ್ಲ. ಹಂಪಿಯ ವಿಜಯ ವಿಠ್ಠಲನ ದೇವಾಲಯ, ಉಗ್ರನರಸಿಂಹನ ದೇವಾಲಯ, ಕಡ್ಲೆಕಾಳು ಗಣಪನ ವಿಗ್ರಹವನ್ನ ಯಾರು ಕೆತ್ತಿದರೂ ಎಂಬುದು ಗೊತ್ತಿಲ್ಲ. ವಿರೂಪಾಕ್ಷನ ದೇವಾಲಯ ಕೆತ್ತನೆ ಮಾಡಿದವರ ಶಿಲ್ಪಿಯ ಹೆಸರು ಗೊತ್ತಿಲ್ಲ. ಇದೆಲ್ಲವನ್ನೂ ನೋಡಿದರೆ ಇದು ಅರ್ಧ ಸತ್ಯದ ಚರಿತ್ರೆ ಎನ್ನಬಹುದು ಎಂದು ವಿಶ್ಲೇಷಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ಪ್ರಾಚೀನ ಕನ್ನಡ ಕಾವ್ಯ ಪುಸ್ತಕವನ್ನು ನಾವೇ ಪ್ರಕಟ ಮಾಡಿದ್ದೇವೆ. ಪ್ರಾಚೀನ ಕಾವ್ಯಗಳನ್ನು ಹೊಸ ದೃಷ್ಟಿಕೋನಗಳಿಂದ ನೋಡತಕ್ಕದ್ದು, ಕನ್ನಡ ಮೀಮಾಂಸೆಯು ಕೂಡ ತನ್ನದೇ ಕೊಡುಗೆ ನೀಡಿದೆ. ಬಹುಬಗೆಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ರಾಗೌ ಅವರು, ಕೆಂಪಮ್ಮ ಅವರು ಬರೆದಿರುವ ಪುಸ್ತಕಕ್ಕೆ ಮುನ್ನುಡಿ ಬರೆದು ಸಮರ್ಥರು ಎನ್ನುವ ಮಾತಿಂದ ಹೊಗಳಿದ್ದಾರೆ ಎಂದರು.
ಜಾನಪದ ವಿದ್ವಾಂಸ ಡಾ.ರಾಗೌ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ರಾಮನಗರದ ಪ್ರಕಾಶಕ ಎಸ್.ನಾಗಭೂಷಣ, ಪ್ರಾಧ್ಯಾಪಕಿ ಪ್ರೊ.ಕೆಂಪಮ್ಮ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net