ನಗರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಉದ್ಯಾನದಲ್ಲಿ ಜಾನಪದ ಕಲಾಮೇಳ
ನಂದಿನಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಯೋಜನೆ
ಮಂಡ್ಯ:ಜನರ ಪಾರಂಪರಿಕ ಜ್ಞಾನ, ಕಲೆ, ಸಾಹಿತ್ಯ, ನಂಬಿಕೆ, ಆಚಾರ ವಿಚಾರ, ಬಟ್ಟೆ ಹಳ್ಳಿಯ ಬದುಕೇ ಜಾನಪದ. ಇಂತಹ ಜನರಿಂದ ಹುಟ್ಟಿದ ಜಾನಪದ ಇಂದಿನ ದಿನಮಾನದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪರಿಣಾಮವಾಗಿ ಕ್ಷೀಣಿಸುತ್ತಿದೆ ಎಂದು ಕನ್ನಿಕಾ ಶಿಲ್ಪಾ ನವೋದಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಚ್.ಆರ್.ಕನ್ನಿಕಾ ಆತಂಕ ವ್ಯಕ್ತಪಡಿಸಿದರು.
ನಗರದ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಉದ್ಯಾನದ ಧ್ಯಾನಮಂದಿರದಲ್ಲಿ ನಂದಿನಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಜಾನಪದ ಕಲಾಮೇಳ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದವು ಕೇವಲ ಮನರಂಜನೆಯಲ್ಲ. ಬದಲಿಗೆ ನಮ್ಮ ಮಣ್ಣಿನ ವಾಸನೆ, ನಮ್ಮ ಅಸ್ಮಿತೆ. ಅಂತೆಯೇ ಅಕ್ಷರ ಕಲಿಯದ ಸಾಹಿತಿಗಳು ಕಟ್ಟಿದ ಅದ್ಭುತ ಲೋಕ ಎಂದು ಬಣ್ಣಿಸಿದರು.
ಕನ್ನಡಪರ ಸಂಘಟನೆಗಳು ಸರ್ಕಾರ ಪ್ರೋತ್ಸಾಹ ನೀಡಿದಲ್ಲಿ ಮುಂದಿನ ಪೀಳಿಗೆಗೆ ಜಾನಪದ ಕಲೆ ಉಳಿಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ ಅವರು, ನಮ್ಮ ಹಿರಿಯರು ಕಟ್ಟಿ ಉಳಿಸಿ ಬೆಳೆಸಿದ ಜಾನಪದ ಕಲೆ ಉಳಿಯಲಿ, ಕಲಾವಿದ ಬೆಳೆಯಲಿ. ಜಾನಪದ ಮರೆತರೆ ಹೆತ್ತ ತಾಯಿಯನ್ನು ಮರೆತಂತೆ. ಮಾತೃಭಾಷೆ, ನಮ್ಮ ಸಂಸ್ಕೃತಿಗೆ ಸವಾಲಾಗಿರುವ ವಿದೇಶಿ ಸಂಸ್ಕೃತಿಯನ್ನು ಧಿಕ್ಕರಿಸಿ ಮಾನವೀಯ ಸಂಬಂಧಗಳನ್ನು ಬೆಸೆಯುವ ಜಾನಪದ ಕಲೆಯನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.
ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ರೀಲ್ಸ್ ಜಗತ್ತಿನಲ್ಲಿ ರಿಯಲ್ ಕಲೆಗಳು ವಿನಾಶದ ಹಾದಿ ಹಿಡಿದಿರುವುದು ಶೋಚನೀಯ. ಮನುಷ್ಯನ ಬದುಕು ಕಟ್ಟಿಕೊಡುತ್ತಿದ್ದ ಜನಪದ ಕಲೆಯತ್ತ ಯುವಜನತೆ ಆಸಕ್ತಿ ಬೆಳೆಸಿಕೊಂಡರೆ ಮಾತ್ರ ನಮ್ಮ ಪೂರ್ವಜರ ಸೌಹಾರ್ದಯುತ ಬದುಕು ಅರ್ಥವಾಗುತ್ತದೆ. ಪಠ್ಯಪುಸ್ತಕಗಳಲ್ಲಿ ಜಾನಪದವನ್ನು ಬೋಧಿಸಬೇಕಾದ ಅವಶ್ಯಕತೆ ಹೆಚ್ಚಿದೆ. ಸರ್ಕಾರ ಹಳ್ಳಿಗಾಡಿನ ಕಲೆಯನ್ನು ಉಳಿಸಿ ಬೆಳೆಸಲು ವಿಶೇಷ ಆಸಕ್ತಿ ವಹಿಸಬೇಕಿದೆ. ಆಧುನಿಕತೆಯ ಅಬ್ಬರದಲ್ಲಿ ಮಾನವೀಯ ಸಂಬಂಧಗಳನ್ನು ಬೆಸೆಯಲು ಜಾನಪದ ಕಲೆ ಸಹಕಾರಿಯಾಗಲಿದೆ. ಜಾನಪದ ಸಂಸೃತಿಯು ಅನುಭಾವದಿಂದ ಕೂಡಿದ್ದು ಜನರ ಜೀವನ ಪದ್ಧತಿ, ಸಂಸ್ಕಾರ, ಆಚಾರ-ವಿಚಾರ ಹಾಗೂ ಬದುಕಿನ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಅಂತಹ ಹಿರಿಯರ ತಲೆಮಾರಿನ ಬೇರನ್ನು ಪರಿಚಯಿಸುತ್ತಿರುವ ನಂದಿನ ಸಮಾಜ ಸೇವಾ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದರು.
ಕೆರಗೋಡು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಜಿ.ಮಹೇಶ್ ಮಾತನಾಡಿ, ಹಳ್ಳಿಯ ಬದುಕಿನ ಸೊಗಡನ್ನು ಬಿಂಬಿಸುವ ನಮ್ಮ ಸಂಸ್ಕೃತಿಯ ಪ್ರತೀಕ ಜಾನಪದವನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ಅನಿವಾರ‌್ಯವಾಗಿದೆ ಎಂದರು.
ನಿವೃತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ರಾಜಶೇಖರ್, ಬಸರಾಳು ಬಸವರಾಜ್, ಸ್ವಾಮಿ ಇತರರಿದ್ದರು. ಇದೇ ವೇಳೆ ಎಚ್.ಸಿ.ಮಹೇಶ್ ಕುಮಾರ್ ತಂಡದವರು ವೀರಗಾಸೆ, ದೇವರಾಜು, ಕು.ಜ್ಞಾನವೇಣಿ ಅನಗಟ್ಟಿ, ಲಕ್ಷ್ಮಮ್ಮ, ಶೇಷಾದ್ರಿ ತಂಡದಿಂದ ಜಾನಪದ ಗಾಯನ ನಡೆಯಿತು.