ಮದ್ದೂರು ತಾಲೂಕಿನ ಶಿವಾರಗುಡ್ಡದಲ್ಲಿರುವ ನವೋದಯ ಶಾಲೆ ಆವರಣದಲ್ಲಿ ನವೋದಯ ಶಾಲೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಉದ್ಘಾಟಿಸಿರು. ರಮೇಶಗೌಡ, ಸಿ.ಚಂದ್ರಾಜ್, ಕೆ.ಎಂ.ಕೃಷ್ಣೇಗೌಡ, ಸಿ.ಎನ್.ಮಂಜೇಶ್ ಸೇರಿದಂತೆ ಇತರರಿದ್ದರು.
ಕನ್ನಡ ರಾಜ್ಯೋತ್ಸವ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ
ಮದ್ದೂರು : ಜನಪದ ಕಲೆಗಳು ಜನರಿಂದ ದೂರವಾಗಲು ಆಧುನಿಕ ತಂತ್ರಜ್ಞಾನವೇ ಕಾರಣ ಎಂದು ಕರ್ನಾಟಕ ಜನಪದ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ತಾಲೂಕಿನ ಶಿವಾರಗುಡ್ಡದಲ್ಲಿರುವ ನವೋದಯ ಶಾಲೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯಕ್ಷಗಾನ, ಕಂಸಾಳೆ, ವೀರಗಾಸೆ ಮುಂತಾದ ಕಲೆಗಳು ಉಳಿಯಲು ನಾವು ಶ್ರಮಿಸಬೇಕು. ಸಿನಿಮಾ ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನಗಳು ಜನಪದ ಕಲೆಗಳಿಗೆ ಮಾರಕವಾಗುತ್ತಿವೆ. ಜನಪದರ ಜೀವಾಳವಾಗಿರುವ ಶ್ರಮಿಕರ ಹಾಡುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ನುಡಿದರು.
ಬಳಿಕ ಮಾತನಾಡಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶಗೌಡ, ಕನ್ನಡ ಭಾಷೆಯ ಜನಪದ ಲೋಕ ಶ್ರೀಮಂತವಾಗಿದೆ. ಅದರ ಉಳಿವಿಗೆ ಸರ್ಕಾರ ಮತ್ತು ಜನರು ಶ್ರಮಿಸಬೇಕು. ಗಾದೆಮಾತು, ಒಡಪು, ಲಾವಣಿ ಮುಂತಾದ ಕಲೆಗಳು ಜನಮಾನಸದಲ್ಲಿ ಉಳಿಯಲು ಎಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು.
ಜನಪದ ಮತ್ತು ಹಾಸ್ಯ ಕಲಾವಿದ ಸಿ.ಚಂದ್ರಾಜ್, ಮನುಷ್ಯ ಆಧುನಿಕ ಬದುಕಿನ ಸಂಕೋಲೆಗಳಲ್ಲಿ ಸಿಲುಕಿ ಶ್ರಮವನ್ನು ಮರೆತಿದ್ದಾನೆ ಎಂದು ಹೇಳಿ, ದಿನನಿತ್ಯದ ಬದುಕಿನ ಪ್ರಸಂಗಗಳನ್ನು ಹಾಸ್ಯಭರಿತವಾಗಿ ಹಾಡಿ ಮಕ್ಕಳ ಮನಸ್ಸು ಗೆದ್ದರು. ಮಂಡ್ಯದ ಗಂಡು ಅಂಬರೀಶ್ ಅವರನ್ನು ಸ್ಮರಿಸಿ, ಅವರ ಕೆಲವು ಚಲನಚಿತ್ರಗಳ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿಬಿಎಸ್‌ಇ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದ ಹತ್ತನೇ ತರಗತಿಯ ವಿದ್ಯಾರ್ಥಿನಿ ಕೆ.ಎ.ವರ್ಷಿಕಾಗೆ ವಿಶೇಷ ಬಹುಮಾನ ನೀಡಲಾಯಿತು.
ಜಾನಪದ ತಜ್ಞ ಕೆ.ಎಂ.ಕೃಷ್ಣೇಗೌಡ ಕೀಲಾರ, ಸಿ.ಎನ್. ಮಂಜೇಶ್, ಪ್ರಾಂಶುಪಾಲ ಕೆ.ಪಾರ್ತಿಬನ್, ಉಪಪ್ರಾಂಶುಪಾಲ ಸತ್ಯಲಿಂಗಂ, ಕಚೇರಿ ಅಧೀಕ್ಷಕ ಗಣೇಶ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಅನುಪಮಾ, ಶಿಕ್ಷಕ ಡಾ.ಬಸವರಾಜ ಬನ್ನೂರ, ಸುಭಾಷ್ ಚಿನ್ನಿಕಟ್ಟಿ ಮತ್ತಿತರರಿದ್ದರು.