ಪರ್ಯಾಯ ಬೆಳೆಗಳತ್ತ ಗಮನಹರಿಸಿ

 ಕೆ.ಆರ್.ಪೇಟೆ ತಾಲೂಕಿನ ಸಿಂಧಘಟ್ಟ ಗ್ರಾಮದಲ್ಲಿ ಮಳೆ ಕೊರತೆಯಿಂದ ಒಣಗಿರುವ ಹಲಸಂದೆ ಬೆಳೆಯನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪರಿಶೀಲಿಸಿದರು.
ಕೆ.ಆರ್.ಪೇಟೆ ತಾಲೂಕಿನ ಸಿಂಧಘಟ್ಟ ಗ್ರಾಮದಲ್ಲಿ ಮಳೆ ಕೊರತೆಯಿಂದ ಒಣಗಿರುವ ಹಲಸಂದೆ ಬೆಳೆಯನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ
  • ಸಿಂಧಘಟ್ಟ, ತೆಂಡೆಕೆರೆ ಜಮೀನಿನಲ್ಲಿ ಬರ ಪರಿಶೀಲನೆ

ಕೆ.ಆರ್.ಪೇಟೆ:

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ತಾಲೂಕಿನ ಸಿಂಧಘಟ್ಟ ಹಾಗೂ ತೆಂಡೆಕೆರೆ ಗ್ರಾಮಗಳಲ್ಲಿ ಹಲಸಂದೆ ಬೆಳೆ ಒಣಗಿ ನಿಂತಿದೆ. ಸಚಿವ ಎನ್.ಚಲುವರಾಯಸ್ವಾಮಿ ಭಾನುವಾರ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಜಮೀನಿಗೆ ತೆರಳಿದ ಸಚಿವರು ಮಳೆ ಕೊರತೆಯಿಂದ ಸಂಪೂರ್ಣವಾಗಿ ಒಣಗಿರುವ ಹಲಸಂದೆ ಹಾಗೂ ಕಬ್ಬನ್ನು ವೀಕ್ಷಿಸಿದರು. ಗಿಡಗಳ ಬೆಳವಣಿಗೆ, ಮಣ್ಣಿನಲ್ಲಿನ ತೇವಾಂಶದ ಪ್ರಮಾಣ, ಬಿತ್ತನೆಗೆ ತಗುಲಿದ ವೆಚ್ಚ ಹಾಗೂ ಇಳುವರಿ ಮೇಲೆ ಉಂಟಾಗಿರುವ ಪರಿಣಾಮದ ಕುರಿತು ರೈತರಿಂದ ಮಾಹಿತಿ ಪಡೆದುಕೊಂಡರು.
ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳೆಗಳು ಒಣಗುತ್ತಿರುವುದು ಗಮನಕ್ಕೆ ಬಂದಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ವಾಸ್ತವ ಪರಿಸ್ಥಿತಿ ತಿಳಿದುಕೊಳ್ಳಲಾಗುತ್ತಿದೆ. ಮುಂದಿನ ಒಂದು ವಾರ ಮಳೆಯ ಪ್ರಮಾಣವನ್ನು ಗಮನಿಸಿ, ಪರಿಸ್ಥಿತಿಗೆ ಅನುಗುಣವಾಗಿ ರೈತರಿಗೆ ಅಗತ್ಯ ನೆರವು ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ರೈತರು ಹೆಚ್ಚು ನೀರು ಅಗತ್ಯವಿರುವ ಬೆಳೆಗಳ ಬದಲು ಕಡಿಮೆ ಅವಧಿಯಲ್ಲಿ ಬೆಳೆಯಬಹುದಾದ ಅಲ್ಪಾವಧಿ ಹಾಗೂ ಪರ್ಯಾಯ ಬೆಳೆಗಳತ್ತ ಗಮನಹರಿಸಬೇಕು. ಸ್ಥಳೀಯ ಹವಾಮಾನ ಹಾಗೂ ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಯಾವ ಬೆಳೆ ಸೂಕ್ತ ಎಂಬ ಬಗ್ಗೆ ಕೃಷಿ ವಿಜ್ಞಾನಿಗಳ ಮೂಲಕ ರೈತರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪೂರ್ವ ಮುಂಗಾರು ಮತ್ತು ಮುಂಗಾರು ಅವಧಿಯಲ್ಲಿ ಯಾವ ಬೆಳೆಗಳನ್ನು ಬೆಳೆಯಬೇಕು. ಬಿತ್ತನೆ ಯಾವ ಸಮಯದಲ್ಲಿ ಮಾಡಬೇಕು. ಕಡಿಮೆ ಮಳೆಯ ಸಂದರ್ಭದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕೃಷಿ ಇಲಾಖೆ ರೈತರಿಗೆ ಗ್ರಾಮ ಮಟ್ಟದಲ್ಲಿ ಮಾಹಿತಿ ನೀಡಬೇಕು. ಕೃಷಿ ವಿಜ್ಞಾನಿಗಳು ಹಾಗೂ ಇಲಾಖೆಯ ತಾಂತ್ರಿಕ ಸಿಬ್ಬಂದಿಯನ್ನು ಬಳಸಿಕೊಂಡು ರೈತರಿಗೆ ವೈಜ್ಞಾನಿಕ ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಮಳೆ ಕೊರತೆ, ಬರ ಹಾಗೂ ಇತರ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಭದ್ರತೆ ಒದಗಿಸಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ನೆರವಾಗಲಿದೆ. ಹೀಗಾಗಿ ಅರ್ಹ ರೈತರೆಲ್ಲರೂ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು. ವಿಮೆ ನೋಂದಣಿ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸಿ, ಯಾವುದೇ ಅರ್ಹ ರೈತರು ಯೋಜನೆಯಿಂದ ಹೊರಗುಳಿಯದಂತೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿನ ಮಳೆ ಕೊರತೆ, ಬೆಳೆ ಹಾನಿ, ತೇವಾಂಶದ ಪ್ರಮಾಣ ಹಾಗೂ ರೈತರ ಪರಿಸ್ಥಿತಿಯ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿಯ ಆಧಾರದ ಮೇಲೆ ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಹಾಗೂ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಮುಖಂಡ ಬಿ.ಎಲ್.ದೇವರಾಜು, ಕಿಕ್ಕೇರಿ ಸುರೇಶ್, ಕೈಮಗ್ಗ ನಿಗಮದ ಅಧ್ಯಕ್ಷ ನಾಗೇಂದ್ರಕುಮಾರ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಕಾಂಗ್ರೆಸ್ ಮುಖಂಡ ಶೀಳನೆರೆ ಅಂಬರೀಶ್, ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net