ಮಂಡ್ಯ: ಕಬ್ಬಿನ ಪ್ರೋತ್ಸಾಹಧನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸರ್‌ಎಂ.ವಿ.ಪ್ರತಿಮೆ ಎದುರು ಜಮಾವಣೆಗೊಂಡು ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಘೋಷಣೆ ಕೂಗಿದರು. ಇದರಿಂದಾಗಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಪ್ರತಿ ಟನ್ ಕಬ್ಬಿಗೆ ಸರ್ಕಾರದಿಂದ ತಲಾ 50 ರೂ ಮತ್ತು ಕಾರ್ಖಾನೆಯಿಂದ 50 ರೂ ಸೇರಿದಂತೆ ಒಟ್ಟು 100 ರೂ ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿದರು.
ಪಾಂಡವಪುರ ತಾಲೂಕು ಮಾಡ್ರಹಳ್ಳಿ ಗ್ರಾಮದಲ್ಲಿ ಎರಡು ಸಾವಿರ ಎಳನೀರನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕ್ರಮ ಆಗಿಲ್ಲ. ಇದಲ್ಲದೆ, ಚಿಕ್ಕಮರಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ರೈತರು ಕೃಷಿ ಕೆಲಸಕ್ಕೆ ಹೋಗಲು ಭಯ ಪಡುತ್ತಿದ್ದಾರೆ. ಅರಣ್ಯ ಅಧಿಕಾರಿಗಳು ಸುಮಾರು 200 ಚಿರತೆಗಳಿವೆ ಎನ್ನುತ್ತಾರೆ. ಆದರೆ ಬೋನುಗಳನ್ನು ಇಟ್ಟು ಚಿರತೆ ಸೆರೆಯಿಡಿಯುತ್ತಿಲ್ಲ. ಜತೆಗೆ ಸಿಬ್ಬಂದಿ ಇಲ್ಲ ಎನ್ನುವ ನೆಪ ಹೇಳುತ್ತಿದ್ದಾರೆ. ಸಿಬ್ಬಂದಿಯೇ ಇಲ್ಲದೇ ಹೋದ ಮೇಲೆ ಚಿರತೆ ನಿಯಂತ್ರಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಅಡಿಕೆ ಕಳ್ಳತನ ಮತ್ತು ಪಂಪ್‌ಸೆಟ್ ಮೋಟಾರ್ ಕಳ್ಳತನವು ದಿನೇದಿನೇ ಹೆಚ್ಚುತ್ತಿದೆ. ಇದನ್ನು ನಿಯಂತ್ರಣ ಮಾಡುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷೃ ವಹಿಸಿದೆ. ಆಯಾ ಪೊಲೀಸ್ ಠಾಣೆಗಳ ಗಮನಕ್ಕೆ ತರಲಾಗಿದೆ. ಇನ್ನೂ ಕೆಲವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆದರೂ ಕಳ್ಳತನ ನಿಯಂತ್ರಣಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.