ಆರಣಿ ಗ್ರಾ.ಪಂ.ಗೆ ಭೇಟಿ: ತಾಲೂಕಿನ ಆರಣಿ ಗ್ರಾಮ ಪಂಚಾಯಿತಿಗೆ ಜಿ.ಪಂ.ಸಿಇಒ ಕೆ.ಆರ್.ನಂದಿನಿ ಭೇಟಿ ನೀಡಿ ಗ್ರಾಮ ಪಂಚಾಯಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ, ಗ್ರಾಮ ಪಂಚಾಯಿತಿಯಲ್ಲಿನ ಅಭಿಲೇಖಾಲಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೊಠಡಿ, ಕಂಪ್ಯೂಟರ್ ಆಪರೇಟರ್ ಕೊಠಡಿ ಹಾಗೂ ಮೀಟಿಂಗ್ ಹಾಲ್ ಗಳನ್ನು ಪರಿಶೀಲಿಸಿದರು. ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳೊಡನೆ ಗ್ರಾಮದಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿ, ಕುಡಿಯುವ ನೀರಿನ ಪೂರೈಕೆ, ತೆರಿಗೆ ವಸೂಲಾತಿ, ಸಕಾಲ ಸೇವೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಜಲ ಜೀವನ್ ಮಿಷನ್ ಯೋಜನೆ ಮುಂತಾದ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ಪಡೆದರು. ಪಂಚಾಯಿತಿಯಲ್ಲಿನ ಕಾರ್ಯವೈಖರಿಗಳ ಕುರಿತು ಎಲ್ಲ ಸಿಬ್ಬಂದಿಗಳೊಡನೆ ಹಾಗೂ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಹಾಗೂ ಟಿ.ಪಿ.ಒ ಅವರ ಜತೆ ಚರ್ಚೆ ನಡೆಸಿ, ಸಿಬ್ಬಂದಿಗಳ ಕೊರತೆ ಹಾಗೂ ನೇಮಕಾತಿ ವಿಚಾರವಾಗಿ ಮಾಹಿತಿ ಪಡೆದರು. ಈ ಸಂದರ್ಭ ಸಿಬ್ಬಂದಿ ಕೊರತೆ ಹಾಗೂ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣದ ಕುರಿತು ಸಿಇಒಅವರಿಗೆ ಪಿಡಿಒ ಮಾಹಿತಿ ನೀಡಿದರು.