ಹಲಗೂರು ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ತೆಂಗಿನ ಸಸಿ ನೆಟ್ಟ ಗಿಡಕ್ಕೆ ನೀರೆರೆದರು. ಎಂ.ಮಹೇಂದ್ರ, ನಾಜಿಯಾ ಕೌಸರ್ ಇತರರು ಇದ್ದರು.
ಹಲಗೂರು: ಶುದ್ಧ ಗಾಳಿಗಾಗಿ ಪರಿಸರ ಸಂರಕ್ಷಣೆ ಅವಶ್ಯವಾಗಿದ್ದು, ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು ಎಂದು ಮಳವಳ್ಳಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಎಂ.ಮಹೇಂದ್ರ ತಿಳಿಸಿದರು.
ಸಮೀಪದ ಹಾಡ್ಲಿ ಸರ್ಕಲ್ ಸಮೀಪದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ತೆಂಗಿನ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಆಮ್ಲಜನಕದ ಕೊರತೆ ಎಷ್ಟಿದೆ ಎಂಬುದು ಕೋವಿಡ್ ಕಾಲದಲ್ಲಿ ಅರಿವಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಿರಲು ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಹೆಚ್ಚು ಗಿಡ ಮರಗಳನ್ನು ಬೆಳೆಸಿ ಆಮ್ಲಜನಕದ ಕೊರತೆ ನೀಗಿಸಬೇಕಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ನಾಜಿಯಾ ಕೌಸರ್ ಮಾತನಾಡಿ, ಪರಿಸರ ಸಂರಕ್ಷಣೆ ಬಗ್ಗೆ ಎಲ್ಲರೂ ಗಮನ ಹರಿಸಬೇಕು. ಆದಷ್ಟು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಿ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ನೀಡಬೇಕಿದೆ ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕರಾದ ಶಂಕರ್ ಸ್ವಾಮಿ, ಪ್ರಭಾರ ಪ್ರಾಂಶುಪಾಲರಾದ ಶಹೀಬ್ ಖಾನ್, ಟಿ.ವಿ.ಶಿವಕುಮಾರ್, ಜಿ.ಆನಂದ, ಕಾಂತಾಮಣಿ, ಆಶಾ, ಪಲ್ಲವಿ, ಸಿಡಿಸಿ ಉಪಾಧ್ಯಕ್ಷ ಲಿಂಗರಾಜು ಇತರರು ಇದ್ದರು.