ಹಲಗೂರು: ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಕೈ ಜೋಡಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಜಿ.ಶ್ರೀನಿವಾಸ್ ಮನವಿ ಮಾಡಿದರು.
ಮಳವಳ್ಳಿ ತಾಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಬ್ಯಾಡರಹಳ್ಳಿ ಸಂಯುಕ್ತಾಶ್ರಯದಲ್ಲಿ ಬ್ಯಾಡರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ದಾಖಲಾತಿ ಅಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನ ಖಾಸಗಿ ಶಾಲೆಗಳಲ್ಲಿಯೂ ಇಲ್ಲದ ಮಲ್ಟಿ ಮೀಡಿಯಾ ವ್ಯವಸ್ಥೆ ಸರ್ಕಾರಿ ಶಾಲೆಗಳಿಗೆ ಕಲ್ಪಿಸಲಾಗಿದೆ. ಆದ್ದರಿಂದ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳತ್ತ ಗಮನಹರಿಸಬೇಕು. ಸರ್ಕಾರದ ಈ ಮಹತ್ವದ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಯಶಸ್ವಿ ಮಾಡೋಣ ಎಂದರು.
ಪಿಡಿಒ ಲಿಂಗಯ್ಯ ಮಾತನಾಡಿ, ಶಿಕ್ಷಕರ ಒತ್ತಡದ ಕಾರ್ಯಾಭಾರದ ನಡುವೆಯೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆ ಆಗಿಲ್ಲ ಎಂಬುದಕ್ಕೆ ಫಲಿತಾಂಶಗಳೇ ಸಾಕ್ಷಿಯಾಗಿವೆ. ವಿವಿಧ ಸವಲತ್ತುಗಳ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ದಯಾನಂದ್, ಬಾಬು, ಸಿ.ಆರ್.ಪಿ ಪುಟ್ಟರಾಜು, ಜಿ.ಎಸ್.ಕೃಷ್ಣ, ಮುಖ್ಯ ಶಿಕ್ಷಕ ತೇಜೋಮಯ, ಮಾಹಿತಿ ಶಿಕ್ಷಣ ಸಂಯೋಜಕ ಸುನೀಲ್ ಕುಮಾರ್, ಚುಂಚಣ್ಣ ಇದ್ದರು.