ಸಾಸಲು ಜಾತ್ರೆಯಲ್ಲಿ ಖಾಲಿ ರಥಕ್ಕೆ ಪೂಜೆ

ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ಖಾಲಿ ರಥಗಳಿಗೆ ಭಕ್ತರು ಪೂಜೆ ಸಲ್ಲಿಸಿದರು.
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ಖಾಲಿ ರಥಗಳಿಗೆ ಭಕ್ತರು ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಜರಾಯಿ ಇಲಾಖೆ ಅಧಿಕಾರಿಗಳ ನಿರ್ಲಕ್ಷೃ
ಕಿಕ್ಕೇರಿ : ಹೋಬಳಿಯ ಶ್ರದ್ಧಾ ಕೇಂದ್ರವಾದ ಸಾಸಲು ಕ್ಷೇತ್ರದಲ್ಲಿ ಸೋಮೇಶ್ವರ, ಶಂಭುಲಿಂಗೇಶ್ವರ ಜಾತ್ರೆಯಲ್ಲಿ ಜೋಡಿ ರಥಗಳು ಚಲಿಸದೆ ಭಕ್ತರಲ್ಲಿ ಬೇಸರ ಮೂಡಿಸಿತು.
ಯುಗಾದಿ ತರುವಾಯ ಊರಿನ ಗ್ರಾಮಸ್ತರು ನಿಶ್ಚಯಿಸಿದಂತೆ ಸೋಮವಾರ ಜಾತ್ರೋತ್ಸವ ನಿಗದಿಪಡಿಸಲಾಗಿತ್ತು. ಇಲ್ಲಿನ ಜಾತ್ರೆ, ರಥೋತ್ಸವಕ್ಕೆ ಜಿಲ್ಲೆಯಾದ್ಯಂತ ಭಕ್ತರು ಆಗಮಿಸುವುದುಂಟು. ಆದರೆ ಈ ಬಾರಿ ರಥೋತ್ಸವ ನಡೆಯುವುದಿಲ್ಲ ಎಂದು ಬಹುತೇಕ ದೂರದ ಊರುಗಳಿಂದ ವಿರಳವಾಗಿ ಭಕ್ತರು ಆಗಮಿಸಿದ್ದರು.
ರಥಗಳು ಶಿಥಿಲವಾಗಿದೆ ಎಂಬ ನೆಪದಲ್ಲಿ ಮುಜರಾಯಿ ಇಲಾಖೆ ನಾಲ್ಕು ವರ್ಷಗಳಿಂದ ಜಾತ್ರೆಯಲ್ಲಿ ರಥಗಳನ್ನು ಎಳೆಯುತ್ತಿಲ್ಲ. ಕಳೆದ ವರ್ಷ ಸೋಮೇಶ್ವರ, ಶಂಭುಲಿಂಗೇಶ್ವರ ಉತ್ಸವ ಮೂರ್ತಿಗಳನ್ನು ಎರಡು ರಥಗಳಲ್ಲಿ ಪ್ರತಿಷ್ಠಾಪಿಸಿ ಭಕ್ತರು ನಿಧಾನವಾಗಿ ಎಳೆಯುವಂತೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ವರ್ಷ ಮುಜರಾಯಿ ಅಧಿಕಾರಿಗಳು ಉತ್ಸವ ಮೂರ್ತಿಯನ್ನು ರಥಬೀದಿಯಲ್ಲಿ ಮೆರವಣಿಗೆ ಮಾಡಿಸದೆ, ರಥದಲ್ಲಿಯೂ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸದೆ, ಧ್ವಜಪತಾಕೆ, ಹೂವಿನ ಅಲಂಕಾರಕ್ಕೂ ಅವಕಾಶ ನೀಡದೆ, ಕೇವಲ ಖಾಲಿ ರಥಕ್ಕೆ ಪೂಜಿಸಲು ಅವಕಾಶ ನೀಡಲಾಗಿತ್ತು.
ಪರಿಣಾಮ ಅರ್ಚಕರು ರಥಗಳಿಗೆ ಸಾಂಕೇತಿಕವಾಗಿ ಪೂಜಿಸಿದರು. ಭಕ್ತರು ದೇವರನ್ನ ಪೂಜಿಸಲು ಖುಷಿಯಿಂದ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದರು. ರಂಗಬೀದಿಯಲ್ಲಿನ ದೇವರ ಮೂರ್ತಿಯಿಲ್ಲದ ಖಾಲಿ ರಥಗಳಿಗೆ ಹಣ್ಣು ಕಾಯಿಯೊಂದಿಗೆ ಪೂಜಿಸಿ ಬೇಸರದಿಂದ ಮನೆಗೆ ಹಿಂತಿರುಗಿದರು.
ಭಕ್ತರ ಶಾಪ: ಮುಜರಾಯಿ ದೇಗುಲವಾಗಿದ್ದು ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ಇಲಾಖೆಗೆ ಬರಲಿದೆ. ಜೀರ್ಣೋದ್ಧಾರ ನೆಪದಲ್ಲಿ ಶಂಭುಲಿಂಗೇಶ್ವರ, ಸೋಮೇಶ್ವರ ದೇಗುಲವನ್ನು ಕೆಡವಲಾಗಿದೆ. ಇನ್ನು ದೇಗುಲ ಕಾಮಗಾರಿ ಮುಗಿದಿಲ್ಲ. ಭಕ್ತರಿಗೆ ದೇವರ ದರ್ಶನ, ಪೂಜೆಗೆ ತೊಂದರೆಯಾಗುತ್ತಿದೆ. ರಥೋತ್ಸವ ನಡೆಯದಂತೆ ಆಗಿದೆ. ಕನಿಷ್ಠ ರಥಗಳಲ್ಲಿ ದೇವರ ಮೂರ್ತಿ ಕೂರಿಸಿ ಪೂಜಿಸಲು ಅನುಕೂಲ ಮಾಡಿಲ್ಲ. ಮುಜರಾಯಿ ಅಧಿಕಾರಿಗಳಿಗೆ ಭಕ್ತರ ನಿವೇದನೆಯೇ ತಿಳಿಯದಾಗಿದೆ ಎಂದು ಭಕ್ತ ಗುರುಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ರಥಗಳು ಶಿಥಿಲವಾಗಿದೆ. ರಥ ನಿರ್ಮಾಣ ತಡವಾಗಿದೆ. ಮುಂದಿನ ವರ್ಷದಲ್ಲಿ ರಥ ನಿರ್ಮಿಸಿ ಜಾತ್ರೆಯನ್ನು ಸಡಗರದಿಂದ ರಥೋತ್ಸವದ ಮೂಲಕ ಆಚರಿಸುವ ವ್ಯವಸ್ಥೆ ಮಾಡಲಾಗುವುದು.
ಎಸ್.ಯು. ಅಶೋಕ್
ಮುಜರಾಯಿ ಇಲಾಖೆ ಅಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net