ನಾಲ್ಕು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೊದಲ ಅತ್ಯಾಧುನಿಕ ವಿದ್ಯುತ್ ಚಿತಾಗಾರ
ಯುಐಡಿಎಫ್ ಮತ್ತು ನಗರಸಭೆ ಅನುದಾನ
ಮಂಡ್ಯ: ನಗರದ ಕಲ್ಲಹಳ್ಳಿ ಸ್ಮಶಾನದಲ್ಲಿ ನಾಲ್ಕು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೊದಲ ಅತ್ಯಾಧುನಿಕ ವಿದ್ಯುತ್ ಚಿತಾಗಾರ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿ ಪೂಜೆ ನೆರವೇರಿಸಿದರು. ನಗರಸಭೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸಹಯೋಗದಲ್ಲಿ ಯುಐಡಿಎಫ್ ಮತ್ತು ನಗರಸಭೆ ಅನುದಾನದಲ್ಲಿ ಕಾಮಗಾರಿ ಮಾಡಲಾಗುತ್ತಿದೆ.
ಈ ವೇಳೆ ಮಾತನಾಡಿದ ಅವರು, ನಾಲ್ಕು ಕೋಟಿ ರೂ ವಿಶೇಷ ಅನುದಾನದಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಾಚರಣೆ ಆರಂಭಿಸುವ ಗುರಿ ಹೊಂದಲಾಗಿದೆ. ಮಂಡ್ಯ ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಮಶಾನಗಳ ಕೊರತೆ ಎದುರಾಗಿದೆ. ಮರಣ ನಂತರದ ವಿಧಿವಿಧಾನಗಳು ನೆಮ್ಮದಿಯಿಂದ ನೆರವೇರಬೇಕು ಎಂಬ ಉದ್ದೇಶದಿಂದ ಸರ್ಕಾರವು ಅತ್ಯಾಧುನಿಕ ಶೈಲಿಯ ವಿದ್ಯುತ್ ಚಿತಾಗಾರವನ್ನು ತರಲು ನಿರ್ಧರಿಸಿದೆ ಎಂದು ಶಾಸಕರು ಸ್ಪಷ್ಟಪಡಿಸಿದರು.
ಇದರ ಜತೆಗೆ ಸ್ವರ್ಣಸಂದ್ರ ಮತ್ತು ಚಿಕ್ಕೇಗೌಡನ ದೊಡ್ಡಿ ನಿವಾಸಿಗಳ ಅನುಕೂಲಕ್ಕಾಗಿ ಅಗ್ನಿಶಾಮಕ ಠಾಣೆ ಸಮೀಪ ಒಂದು ಎಕರೆ ಜಾಗವನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಅದನ್ನು ಸ್ಮಶಾನಕ್ಕಾಗಿ ಹಸ್ತಾಂತರಿಸಲಾಗುವುದು. ನಗರದ ಎಲ್ಲ ಸ್ಮಶಾನಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಅಗತ್ಯ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಪೌರಾಯುಕ್ತೆ ಪಂಪಾಶ್ರೀ, ನಗರಸಭೆಯ ಮಾಜಿ ಅಧ್ಯಕ್ಷ ಮಂಜು, ಅಂಬುಜಮ್ಮ, ಮುಖಂಡರಾದ ಕಲ್ಲಹಳ್ಳಿ ಆನಂದ್, ಮುಡಾ ಮಾಜಿ ನಿರ್ದೇಶಕ ಎಂ.ಕೃಷ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ರವೀಂದ್ರ ಇತರರಿದ್ದರು.