ಶಿಕ್ಷಣದಿಂದ ಮಾತ್ರ ಸಮಸಮಾಜ ನಿರ್ಮಾಣ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು.
ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಅಂಬೇಡ್ಕರ್ ಜಯಂತ್ಯುತ್ಸವ ಆಚರಣೆ
  • ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜನೆ
ಮಂಡ್ಯ: ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಭದ್ರತೆ ಮತ್ತು ಸಮಾನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೃಹತ್ ಸಂವಿಧಾನವನ್ನು ನೀಡಿದ್ದಾರೆ. ವಿಶ್ವವೇ ಭಾರತ ಸಂವಿಧಾನವನ್ನು ಒಪ್ಪಿಕೊಂಡಿರುವುದು ದೇಶಕ್ಕೆ ಹೆಮ್ಮೆಯ ವಿಷಯ. ಅಂತೆಯೇ ಶಿಕ್ಷಣ ಒಂದು ಶಕ್ತಿಯಾಗಿ ಪ್ರತಿಯೊಬ್ಬರ ದಾರಿದೀಪವಾಗಿದೆ. ಶಿಕ್ಷಣದಿಂದ ಮಾತ್ರ ಸಮಾಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಭಾರತರತ್ನ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನವು ಎಲ್ಲ ವರ್ಗಗಳಿಗೂ ಸಮಾನತೆ ಹಾಗೂ ಸ್ವಾತಂತ್ರ್ಯದ ಹಕ್ಕು ನೀಡಿದೆ. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದ ಅದು ಸಾಧ್ಯವಾಗಿದೆ. ಹಾಗಾಗಿ ನಾವು ಬಾಬಾ ಸಾಹೇಬರಿಗೆ ನಮನ ಸಲ್ಲಿಸಬೇಕು ಎಂದರು.
ಪ್ರಪಂಚವೇ ಬಾಬಾ ಸಾಹೇಬರು ಬರೆದಂತ ಸಂವಿಧಾನವನ್ನು ಒಪ್ಪಿದೆ. ಮಹಾತ್ಮ ಗಾಂಧಿಜೀ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವು ಗೌರವಸುತ್ತೇವೆ. ಸಂವಿಧಾನ ಇಲ್ಲದಿದ್ದರೆ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬರುತ್ತಿತ್ತು. ಶಿಕ್ಷಣದಿಂದ ಸಂವಿಧಾನ ದೊರೆಯಿತು. ಶಿಕ್ಷಣ ಎಂಬುದು ಉದ್ಯೋಗಕ್ಕೆ ಮಾತ್ರ ಸೀಮಿತವಾಗದೆ. ದೇಶದ ಇತಿಹಾಸ ತಿಳಿದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಎಲ್ಲರಿಗೂ ಶಿಕ್ಷಣ ನೀಡಲು ಸರ್ಕಾರ ಸಾಕಷ್ಟು ಕಾರ್ಯಕ್ರಮ ನೀಡುತ್ತಿದೆ. ರಾಜಕೀಯ, ಸಾಮಾಜಿಕ ಹಾಗೂ ಸಮಾನತೆಗೆ ಅವಕಾಶವಿದೆ. ಸಮಾಜವನ್ನು ನಾವು ಕಟ್ಟಬೇಕು. ಅದಕ್ಕೆ ಅಂಬೇಡ್ಕರ್ ತತ್ವ, ಆದರ್ಶಗಳು ನಮಗೆ ಮಾರ್ಗದರ್ಶನವಾಗಿದೆ. ಎಸ್‌ಸಿಪಿ, ಟಿಎಸ್‌ಪಿ ಹಣ ಮೂರು ರಾಜ್ಯದಲ್ಲಿ ಮಾತ್ರ ಬಳಕೆಯಲ್ಲಿದೆ. ಅದೇ ರೀತಿ ನಮ್ಮ ಸರ್ಕಾರ ಎಲ್ಲರಿಗೂ ನ್ಯಾಯ ನೀಡಿದೆ. ಎಲ್ಲ ಸಮುದಾಯಗಳು ಸ್ವಾವಲಂಬನೆಯಿಂದ ಜೀವನ ನಡೆಸುವ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆಯ ಕಾರ್ಯಕ್ರಮ ನೀಡಿದ್ದೇವೆ. ಪರಿಣಾಮ ಶೇ.70ರಷ್ಟು ಜನರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದರು.
ಉಪನ್ಯಾಸ ನೀಡಿದ ಮೈಸೂರು ವಿಶ್ವವಿದ್ಯಾಲಯ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ.ಡಿ.ಆನಂದ್, ಜಗತ್ತಿನದ್ಯಾಂತ ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಗುತ್ತದೆ. ಬಹುಮುಖ ವಕ್ತಿತ್ವ ಅವರದು. ಜ್ಞಾನದ ಮೂಲಕ ಪುಸ್ತಕ ಮೂಲಕ ಬಾಬಾ ಸಾಹೇಬರನ್ನು ಅರ್ಥ ಮಾಡಿಕೊಳ್ಳಬೇಕು. ಹಿಂದೂ ಕೋಡ್ ಬಿಲ್ 1950ರ ದಶಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಮಂಡಿಸಲ್ಪಟ್ಟ ಐತಿಹಾಸಿಕ ಕಾನೂನು ಸುಧಾರಣೆಯಾಗಿದೆ. ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಆಸ್ತಿ ಹಕ್ಕು, ವಿಚ್ಛೇದನ, ಏಕಪತ್ನಿತ್ವ ಮತ್ತು ದತ್ತು ಸ್ವೀಕಾರದಂತಹ ಸಮಾನ ಹಕ್ಕುಗಳನ್ನು ತರುವ ಮೂಲಕ ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸ್ಥಾಪಿಸಲು ಪ್ರಯತ್ನಿಸಿತು. ತೀವ್ರ ವಿರೋಧದ ನಂತರ ಕಾಯ್ದೆಯನ್ನು ಪ್ರತ್ಯೇಕ ಕಾಯ್ದೆಗಳಾಗಿ ಅಂಗೀಕರಿಸಲಾಯಿತು ಎಂದು ತಿಳಿಸಿದರು.
ಮಹಿಳೆಯರಿಗೆ ಶಿಕ್ಷಣ ನೀಡಿ ಸಂವಿಧಾನ ಬದ್ದವಾದ ಹಕ್ಕುಗಳ ಬಗ್ಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಹೋರಾಟ ಮಾಡಿದವರು. ಸಮಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹಾಗೂ ಜಾತೀಯತೆ ವಿರುದ್ಧ ಹೋರಾಡಿದವರು. ಬಾಬಾ ಸಾಹೇಬರು ವಿಶ್ವ ನಾಯಕರು. ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಯುವಜನತೆಯೂ ಶಿಕ್ಷಣ ಮುಖ್ಯವಾಗಿ ಪಡೆಯಬೇಕು. ಶಿಕ್ಷಣದಿಂದ ಮಾತ್ರ ಸಮಾಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸಂವಿಧಾನದ ಪ್ರಸ್ತಾವನೆ ಬೋಧನೆ ಮಾಡಿದರು. ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಸಮಾಜಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಶ್ರೀನಿವಾಸ್, ತಹಸೀಲ್ದಾರ್ ವಿಶ್ವನಾಥ್ ಇತರರಿದ್ದರು. ಇದೇ ವೇಳೆ ಸಮುದಾಯದ ಸಾಧಕರಿಗೆ ಗಣ್ಯರು ಸನ್ಮಾನಿಸಿದರು.
ಇದಕ್ಕೂ ಮುನ್ನ ಕಾವೇರಿ ಉದ್ಯಾನದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಸೇರಿದಂತೆ ಹಲವರು ಮಾಲಾರ್ಪಣೆ ಮಾಡಿದರು. ನಂತರ ಡಿಸಿ ಕಚೇರಿಯಿಂದ ಮೆರವಣಿಗೆಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆ ಮೂಲಕ ಸಾಗಿದ ಮೆರವಣಿಗೆ ಅಂಬೇಡ್ಕರ್ ಭವನದಲ್ಲಿ ಮುಕ್ತಾಯವಾಯಿತು.

ವಿಶ್ವಕ್ಕೆ ನೀತಿ ಹೇಳಿಕೊಟ್ಟ ಗುರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಪಿ.ರವಿಕುಮಾರ್ ಗಣಿಗ, ಅಂಬೇಡ್ಕರ್ ಅವರು ವಿಶ್ವಕ್ಕೆ ನೀತಿ ಹೇಳಿಕೊಟ್ಟ ಗುರು. ಇಂದು ಕೆನಡಾ, ಯುರೋಪಿನಲ್ಲಿ ಅಂಬೇಡ್ಕರ್ ಜಯಂತಿ ನಡೆಯುತ್ತಿದೆ. ದೇಶ ಮುನ್ನಡೆಸಲು ಸಾಧ್ಯವಾಗುತ್ತಿರುವುದು ಅವರು ನೀಡಿದ ಸಂವಿಧಾನದಿಂದ ಮಾತ್ರ. ದೇಶಕ್ಕೆ ಗೌರವ ಸಲ್ಲಿಸುವುದಾದರೆ ಸಂವಿಧಾನ ಪ್ರಕಾರ ನಡೆಯಬೇಕು. ಎಲ್ಲರೂ ಶಾಂತಿ ನೆಮ್ಮದಿಯಿಂದ ಬದುಕಬೇಕು. ಅವರ ತತ್ವ, ಸಿದ್ದಾಂತಗಳನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸಬೇಕು. ಸಂವಿಧಾನ ಬದ್ದವಾಗಿ ಸರ್ಕಾರ ಮುನ್ನಡೆಸಬೇಕು, ಅಂಬೇಡ್ಕರ್ ಭವನಗಳ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ಜಿಲ್ಲೆಗೆ 2 ಕೋಟಿ ರೂ ನೀಡಲಾಗುವುದು. ಅವರ ತತ್ವ, ಸಿದ್ಧಾಂತ ಎಲ್ಲ ಮನೆಯಲ್ಲಿ ಬೆಳಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net