ಮಂಡ್ಯ: ಜಿಲ್ಲೆಯನ್ನು ತಂಬಾಕು ಮುಕ್ತವನ್ನಾಗಿ ಮಾಡಲು ವಿವಿಧ ಶಾಲಾ ಮಕ್ಕಳಿಂದ ಪತ್ರ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸುಮಾರು 75 ಸಾವಿರ ಪತ್ರಗಳನ್ನು ಬರೆದು ತಮ್ಮ ಕುಟುಂಬದವರಿಗೆ ತಿಳಿವಳಿಕೆ ಮೂಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಂಬಾಕು ನಿಯಂತ್ರಣ ಕುರಿತ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಎಲ್ಲ ಶಾಲಾ-ಕಾಲೇಜಿನಲ್ಲಿ ತಂಬಾಕು ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅಂತೆಯೇ ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಹಂತದಲ್ಲಿ ತಂಬಾಕು ಮುಕ್ತ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ತಂಬಾಕು ಮಾರಾಟ ಮಾಡುವ ಮಳಿಗೆ ಶಾಲೆ ಮತ್ತು ಕಾಲೇಜು, ಆಸ್ಪತ್ರೆಗಳಿಂದ 100 ಮೀಟರ್‌ನಿಂದ ದೂರವಿರಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ದಾಳಿ ಮಾಡಿ ಪರಿಶೀಲಿಸಿ ಮಳಿಗೆಯ ಪರವಾನಗಿ ರದ್ದುಗೊಳಿಸಿ. ಚಿತ್ರಮಂದಿರಗಳಲ್ಲಿ ತಂಬಾಕು ಸೇವನೆ ಮಾಡುತ್ತಿರುವ ಭಾವಚಿತ್ರ ಮತ್ತು ಪೋಸ್ಟರ್‌ಗಳನ್ನು ಅಳವಡಿಸಬಾರದು. ಉಲ್ಲಂಘನೆ ಮಾಡುವವರಿಗೆ ಕಾನೂನು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜೆ.ಸಿ.ಬೆಟ್ಟಸ್ವಾಮಿ, ವೈದ್ಯಕೀಯ ಸಂಘದ ಜಿಲ್ಲಾಧ್ಯಕ ಡಾ.ಮರೀಗೌಡ, ನಗರಸಭೆ ಪರಿಸರ ಇಂಜಿನಿಯರ್ ರುದ್ರೇಗೌಡ, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ತಿಮ್ಮರಾಜು ಇತರರಿದ್ದರು.