ಇ-ಆಫೀಸ್‌ನಲ್ಲೇ ಕಡತ ವಿಲೇವಾರಿ ಮಾಡಿ

ಮಳವಳ್ಳಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಕುಮಾರ್ ಅವರು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ತಾಪ ಇಒ ಶ್ರೀನಿವಾಸ್ ಇದ್ದರು.
ಮಳವಳ್ಳಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಕುಮಾರ್ ಅವರು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ತಾಪ ಇಒ ಶ್ರೀನಿವಾಸ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಕುಮಾರ್ ಸೂಚನೆ
  • ಮಂಡ್ಯ ತಾಲೂಕು ಕಚೇರಿಗೆ ದಿಢೀರ್ ಭೇಟಿ, ಪರಿಶೀಲನೆ
ಮಳವಳ್ಳಿ: ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಕುಮಾರ್ ಬುಧವಾರ ಅನಿರೀಕ್ಷಿತ ಭೇಟಿ ನೀಡಿ ಕಚೇರಿಯ ವಿವಿಧ ಶಾಖೆಗಳ ಕಾರ್ಯನಿರ್ವಹಣೆ, ಕಡತ ವಿಲೇವಾರಿ ಪ್ರಗತಿ, ಸಿಬ್ಬಂದಿ ಹಾಜರಾತಿ ಪರಿಶೀಲಿಸುವ ಜತೆಗೆ ಹಾಜರಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ನಂತರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರದಿಂದ ಇ-ಆಫೀಸ್ ತಂತ್ರಾಂಶವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಈಗಾಗಲೇ ಹಲವಾರು ಬಾರಿ ಸುತ್ತೋಲೆ ಹೊರಡಿಸಲಾಗಿದ್ದು, ಇ-ಆಫೀಸ್‌ನಲ್ಲಿಯೇ ಕಡ್ಡಾಯವಾಗಿ ಕಡತಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಿಬೇಕು. ಡಿಜಿಟಲ್ ಕಾರ್ಯವಿಧಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದ ಅವರು, ಇ-ಆಫೀಸ್ ಅನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ್ದಿದ್ದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಹಸೀಲ್ದಾರ್ ಲೋಕೇಶ್ ಅವರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಸರ್ಕಾರವು ಆಧುನೀಕರಣ ಹಾಜರಾತಿ ವ್ಯವಸ್ಥೆಯ ಕರ್ತವ್ಯ ಆಪ್ ಅನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಂಡು, ಇ-ಹಾಜರಾತಿಯನ್ನು ದಾಖಲಿಸಲು ಸೂಚಿಸಿದರು.
ಮಳವಳ್ಳಿ ತಾಲೂಕಿನಲ್ಲಿ ಇನ್ನೂ 26,188 ಇ-ಪೌತಿ ಖಾತೆ ಪ್ರಕರಣಗಳು ಬಾಕಿಯಿದ್ದು, ತುರ್ತಾಗಿ ಕಾನೂನುಬದ್ಧ ವಾರಸುದಾರರಿಗೆ ಖಾತೆ ಬದಲಾವಣೆಯನ್ನು ಮಾಡಬೇಕು. 48,392 ಆಧಾರ್ ಸೀಡಿಂಗ್ ಬಾಕಿಯಿದ್ದು, ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಬಾಕಿಯಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಫಾರಂ 1 ರಿಂದ 5, ಲ್ಯಾಂಡ್ ಬೀಟ್, ಬಗರ್ ಹುಕುಂ, ತಹಸೀಲ್ದಾರ್ ನ್ಯಾಯಾಲಯ ಪ್ರಕರಣಗಳು, ಭೂಸುರಕ್ಷಾ, ಆರ್ ಆರ್ ಟಿ ತಿದ್ದುಪಡಿ, ಕಂದಾಯ ಗ್ರಾಮ ರಚನೆ, ಸಕಾಲ, ದರ್ಖಾಸ್ತು ಪೋಡಿ, ಸರ್ವೇ ಕಾರ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಕಚೇರಿಗೆ ಪದೇಪದೆ ಅಲೆಸದೆ ನ್ಯಾಯಸಮ್ಮತ ಸೇವೆ ನೀಡುವಂತೆ ತಿಳಿಸಿದರು.
ಆದಾಯ, ಜಾತಿ, ನಿವಾಸ, ವಂಶವೃಕ್ಷ, ಭೂಹಿಡುವಳಿ ಪ್ರಮಾಣಪತ್ರ ಸೇರಿದಂತೆ ಎಲ್ಲ ಸೇವೆಗಳನ್ನು ಸಕಾಲ ಯೋಜನೆಯಡಿ ನಿಗದಿತ ಅವಧಿಯಲ್ಲಿಯೇ ಒದಗಿಸಬೇಕು. ವಿಳಂಬ ಕಂಡುಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಭಿಲೇಖಾಲಯ ಶಾಖೆಯ ದಾಖಲೆ ನಿರ್ವಹಣೆ ಹಾಗೂ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿ, ಸರ್ಕಾರಕ್ಕೆ ನಿಗದಿತ ಶುಲ್ಕವನ್ನು ಕಡ್ಡಾಯವಾಗಿ ವಸೂಲಾತಿ ಮಾಡಿ ದಾಖಲೆಗಳನ್ನು ಸಂರಕ್ಷಿಸುವಂತೆ ಸಲಹೆ ನೀಡಿದರು.
ವಸತಿ ಉದ್ದೇಶಕ್ಕಾಗಿ ನಿವೇಶನ ರಹಿತರಿಗೆ ನಿವೇಶನ ನೀಡುವ ಅಭಿಯಾನದಲ್ಲಿ ಸರ್ಕಾರದ ನಿರ್ದೇಶನದಂತೆ ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ 5 ಎಕರೆ ಹಾಗೂ ಗರಿಷ್ಠ 20 ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ, ಅಗತ್ಯ ವರದಿ ಸಿದ್ಧ್ದಪಡಿಸಿ ಸಲ್ಲಿಸುವಂತೆ ತಹಸೀಲ್ದಾರ್ ಗೆ ತಿಳಿಸಿದರು.
ಹೋಬಳಿ ಮಟ್ಟದ ಸಿಬ್ಬಂದಿ ಕೇಂದ್ರಸ್ಥಾನದಲ್ಲಿಯೇ ಲಭ್ಯವಿದ್ದು, ಸಾರ್ವಜನಿಕರ ಮನವಿಗಳಿಗೆ ತ್ವರಿತ ಸ್ಪಂದನೆ ನೀಡಬೇಕು ಹಾಗೂ ಕಚೇರಿ ಶಿಸ್ತು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ತಾಪಂ ಇಒ ಶ್ರೀನಿವಾಸ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net