ಹಾಸ್ಟೆಲ್ ಸಮಸ್ಯೆ ವಿದ್ಯಾರ್ಥಿನಿಯರ ಸ್ಥಳಾಂತರ ಮಾಡಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪ ಲೋಕಾಯುಕ್ತ ಭೇಟಿ ಹಿನ್ನೆಲೆಯಲ್ಲಿ ಸಭೆ
  • ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯ ವಿದ್ಯಾರ್ಥಿನಿಲಯಕ್ಕೆ ಕಾಲ ಕಾಲಕ್ಕೆ ಭೇಟಿ ನೀಡಿ
ಮಂಡ್ಯ: ನಗರದ ಬಂದೀಗೌಡ ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಉಪ ಲೋಕಾಯುಕ್ತ ಬಿ.ವೀರಪ್ಪ ಭೇಟಿ ನೀಡಿದ್ದ ಬೆನ್ನಲ್ಲೇ ಸುಸಜ್ಜಿತ ಹಾಗೂ ವಿಶಾಲವಾದ ಕಟ್ಟಡಕ್ಕೆ ವಿದ್ಯಾರ್ಥಿನಿಯರನ್ನು ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದ್ದಾರೆ.
ಕಳೆದ ವಾರ ಬಿ.ವೀರಪ್ಪ ಅವರು ಹಾಸ್ಟೆಲ್‌ಗೆ ಭೇಟಿ ನೀಡಿದ್ದ ಸಮಯದಲ್ಲಿ ಸಮಸ್ಯೆಗಳ ಅನಾವರಣಗೊಂಡಿದ್ದವು. ನೂರು ವಿದ್ಯಾರ್ಥಿನಿಯರಿಗೆ ಮೂರ‌್ನಾಲ್ಕು ಶೌಚಗೃಹ, ಸಣ್ಣ ಕೊಠಡಿ ಸೇರಿದಂತೆ ಹಲವು ಅವ್ಯವಸ್ಥೆ ಕಂಡು ಆಕ್ರೋಶಗೊಂಡಿದ್ದರು. ಅಂತೆಯೇ ಹದಿನೈದು ದಿನದೊಳಗೆ ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕೆಂದು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು.
ಡಿಸಿ ಡಾ.ಕುಮಾರ ಮಾತನಾಡಿ, ಮೆಟ್ರಿಕ್ ನಂತರದ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರು ಕಳಪೆ ವಾತಾವರಣದಲ್ಲಿರುವ ಕಾರಣ ತಕ್ಷಣವೇ ಸುಸಜ್ಜಿತ ಹಾಗೂ ವಿಶಾಲವಾದ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯ ವಿದ್ಯಾರ್ಥಿನಿಲಯಕ್ಕೆ ಕಾಲ ಕಾಲಕ್ಕೆ ಭೇಟಿ ನೀಡಿ ಅಲ್ಲಿ ಬೇಕಾಗಿರುವ ಮೂಲ ಸೌಕರ್ಯಗಳನ್ನು ಪರಿಶೀಲನೆ ಮಾಡಬೇಕು ಎಂದರು.
ಹಾಸ್ಟೆಲ್‌ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಬೇಕು. ಅಡುಗೆ ಕೋಣೆಯಲ್ಲಿ ಬೇಕಾಗುವ ಪರಿಕರಗಳಲ್ಲಿ ಕೊರತೆ ಆಗಬಾರದು. ಹಾಗೂ ಗುಣಮಟ್ಟದ ಆಹಾರ ನೀಡಲು ಅಗತ್ಯ ಕ್ರಮವಹಿಸಬೇಕು. ವಿದ್ಯಾರ್ಥಿಗಳಿಗೆ ಹಾಸ್ಟೆಲ್ನಲ್ಲಿ ಸಮಸ್ಯೆಗಳಾದರೆ ಸಂಬಂಧಪಟ್ಟ ವಾರ್ಡನ್ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳೇ ಜವಾಬ್ದಾರರು ಆಗುತ್ತಾರೆ. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಹಾಗೂ ವಿದ್ಯಾರ್ಥಿ ನಿಲಯದ ವಾರ್ಡನ್‌ಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net