ಸೌಲಭ್ಯ ತಲುಪಿಸುವಲ್ಲಿ ನಿರ್ಲಕ್ಷ್ಯಿಸಿದರೆ ಕ್ರಮ: ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ ಎಚ್ಚರಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ನೇರ ಸಂವಾದವನ್ನು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಉದ್ಘಾಟಿಸಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ನೇರ ಸಂವಾದವನ್ನು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ವಚ್ಛತಾ ಕಾರ್ಮಿಕರೊಂದಿಗೆ ನೇರ ಸಂವಾದ
  • ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜನೆ
ಮಂಡ್ಯ: ಸ್ವಚ್ಛತಾ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ, ಸವಲತ್ತನ್ನು ನಿಗದಿತ ಕಾಲಮಿತಿಯಲ್ಲಿ ಸಮರ್ಪಕವಾಗಿ ತಲುಪಿಸಲು ಮುಂದಾಗುವಂತೆ ಅಧಿಕಾರಿಗಳಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಡ್ಯ ತಾಪಂ ವ್ಯಾಪ್ತಿ ಗ್ರಾಪಂನ ಸ್ವಚ್ಛತಾ ಕಾರ್ಮಿಕರೊಂದಿಗೆ ಆಯೋಜಿಸಿದ್ದ ನೇರ ಸಂವಾದ ಹಾಗೂ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಗಳನ್ವಯ ಸ್ವಚ್ಛತಾ ಕಾರ್ಮಿಕರಿಗೆ ಸೌಲಭ್ಯ ತಲುಪಿಸು ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಆಯೋಗದ ವತಿಯಿಂದ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು. ಪ್ರತಿನಿತ್ಯ ನಗರ ಸ್ವಚ್ಛತೆ ಮಾಡುವ ಕಾರ್ಮಿಕರ ಹಿತ ಕಾಪಾಡಲು ಅಧಿಕಾರಿಗಳು ಬದ್ಧವಾಗಿರಬೇಕು. ಸ್ವಚ್ಛತಾ ಕಾರ್ಮಿಕರಿಗೆ ಜೀವನ ನಿರ್ವಹಣೆಗೆ ತೊಂದರೆಯಾಗದಂತೆ ಪ್ರತಿ ತಿಂಗಳ 5 ರೊಳಗೆ ವೇತನ ಪಾವತಿಸಬೇಕು. ಸಮವಸ್ತ್ರ, ಕೈಗೌಸ್, ಗಮ್‌ಬೂಟ್, ಮಾಸ್ಕ್ ಸೇರಿದಂತೆ ಆರೋಗ್ಯ ಸುರಕ್ಷಾ ಪರಿಕರಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ನಿರ್ದೇಶನ ನೀಡಿದರು.
ಸಫಾಯಿ ಕರ್ಮಚಾರಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ಶ್ರಮಕ್ಕೆ ತಕ್ಕಂತೆ ವೇತನವನ್ನು ಸಮಯಕ್ಕೆ ಸರಿಯಾಗಿ ನೀಡುವುದು. ಕಾರ್ಮಿಕರ ಹಕ್ಕುಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಫಾಯಿ ಕರ್ಮಚಾರಿ ಕುಟುಂಬಗಳ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಆ ಸವಲತ್ತುಗಳು ಅವರಿಗೆ ತಲಪುವ ಕೆಲಸ ಆಗಬೇಕು ಎಂದು ತಿಳಿಸಿದರು.
ಸ್ವಚ್ಛತಾ ಕಾರ್ಮಿಕರಿಗೆ(ಪೌರಕಾರ್ಮಿಕರಿಗೆ) ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುವುದು ಅತ್ಯಂತ ಮುಖ್ಯ. ಆರೋಗ್ಯ ತಪಾಸಣೆ ಮಾಡಿಸಬೇಕು ಹಾಗೂ ರಾಜ್ಯ ಸರ್ಕಾರದಿಂದ ಸ್ವಚ್ಛತಾ ಮತ್ತು ಪೌರ ಕಾರ್ಮಿಕರ ಆರೋಗ್ಯ, ಸುರಕ್ಷತೆ ಹಾಗೂ ಆರ್ಥಿಕ ಭದ್ರತೆಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪೌರ ಕಾರ್ಮಿಕರಿಗೆ ಈ ಬಗ್ಗೆ ಅರಿವು ಮೂಡಿಸಿ, ಅದನ್ನು ಯೋಜನೆ ತಲಪುವಂತೆ ಕೆಲಸ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲ ರೀತಿಯ ಪರಿಕರಗಳನ್ನು ಒದಗಿಸಬೇಕು. ಆಯುಷ್ಮಾನ್ ಕಾರ್ಡ್ ವಿತರಣೆ, ಆಧುನಿಕ ಪರಿಕರಗಳನ್ನು ಕೊಟ್ಟು ಅದಕ್ಕೆ ತಕ್ಕಂತೆ ತರಬೇತಿ ಕೊಡಿಸಬೇಕು. ಆರೋಗ್ಯ ತಪಾಸಣೆ ಮಾಡುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ತಾಪಂ ಇಒ ಲೋಕೇಶ್‌ಮೂರ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net