ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡ್‌ನಲ್ಲಿ ಭಾಷಣ ಮಾಡಿದ್ದ ಸ್ಥಳವನ್ನು ಹಿಂದೂ ಸಂಘಟನೆ ‘ಶುದ್ಧೀಕರಣ’ ಮಾಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಶನಿವಾರ ಜಮಾಯಿಸಿದ ಹೋರಾಟಗಾರರು ಕೆಲಕಾಲ ರಸ್ತೆ ಸಂಚಾರ ತಡೆ ನಡೆಸಿ ಘೋಷಣೆ ಕೂಗಿದರು. ಬಳಿಕ ತಾಲೂಕು ಕಚೇರಿವರೆಗೂ ಮೆರವಣಿಗೆ ನಡೆಸಿ ಧರಣಿ ನಡೆಸಿದರು. ಅಸ್ಪಶ್ಯತೆ ಜೀವಂತವಾಗಿರಿಸುವ ಕೋಮುವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ದಸಂಸ ಮುಖಂಡ ನಂಜುಂಡ ಮೌರ್ಯ ಮಾತನಾಡಿ, ದೇಶದ ಹಿರಿಯ ದಲಿತ ನಾಯಕರೊಬ್ಬರಿಗೆ ಆದ ಅಪಮಾನವಲ್ಲ, ಬದಲಾಗಿ ಇಡೀ ದಲಿತ ಸಮುದಾಯಕ್ಕೆ ಮಾಡಿದ ದೊಡ್ಡ ಅವಮಾನ. ಇದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿಯಲ್ಲ, ಬದಲಿಗೆ ದೇಶದಲ್ಲಿ ಇನ್ನೂ ಜೀವಂತವಾಗಿರುವ ಮನುಷ್ಯತ್ವ ವಿರೋಧಿ ಜಾತಿವಾದಿ ಮನಸ್ಥಿತಿಯ ದ್ಯೋತಕವಾಗಿದೆ ಎಂದು ದೂರಿದರು.
ದಸಂಸ ಮುಖಂಡರಾದ ಗಂಜಾಂ ರವಿಚಂದ್ರು, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಕೆ.ಟಿ.ರಂಗಯ್ಯ,ವಕೀಲ ವೆಂಕಟೇಶ್, ಮೋಹನ್ ಕುಮಾರ್,ಮುಸ್ಲಿಂ ಸೌಹಾರ್ದ ವೇದಿಕೆಯ ಅಫ್ಸರ್ ಖಾನ್, ಷರೀಫ್, ಲತಾ ಕುಮಾರಿ, ಶಾಂತಾ, ಕೋಮಲಾ, ಮಂಗಳ ಇತರರು ಇದ್ದರು.