ಹಿರೋಡೆ ಕೆರೆ ಸಂರಕ್ಷಣೆಗೆ ಒತ್ತಾಯ

ಪಾಂಡವಪುರ ಪಟ್ಟಣದ ಹಿರೋಡೆ ಕೆರೆ ಮೋಳೆ ಬಿದ್ದು ನೀರು ಸೋರಿಕೆಯಾಗುತ್ತಿರುವುದು ಹಾಗೂ ಕೆರೆ ಏರಿ ಮೇಲೆ ಗಿಡ-ಗಂಟಿಗಳು ಬೆಳೆದು ನಿಂತಿರುವುದು.
ಪಾಂಡವಪುರ ಪಟ್ಟಣದ ಹಿರೋಡೆ ಕೆರೆ ಮೋಳೆ ಬಿದ್ದು ನೀರು ಸೋರಿಕೆಯಾಗುತ್ತಿರುವುದು ಹಾಗೂ ಕೆರೆ ಏರಿ ಮೇಲೆ ಗಿಡ-ಗಂಟಿಗಳು ಬೆಳೆದು ನಿಂತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ದೊಡ್ಡೇಗೌಡ ಆರೋಪ
  • ಹಿರೋಡೆ ಕೆರೆ ಸಂರಕ್ಷಣೆಗೆ ಒತ್ತಾಯ
ಪಾಂಡವಪುರ: ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುವ ಹಿರೋಡೆ ಕೆರೆ ಸಂರಕ್ಷಣೆ ಮಾಡುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದು, ಇದರ ಪರಿಣಾಮ ಕೆರೆ ಬಿರುಕು ಬಿದ್ದು ನೀರು ಸೋರಿಕೆಯಾಗುತ್ತಿದೆ ಎಂದು ಹಿರೋಡೆ ಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ದೊಡ್ಡೇಗೌಡ ಆರೋಪಿಸಿದರು.
ಪಾಂಡವಪುರ ಪಟ್ಟಣ ಮತ್ತು ಕುಂತಿ ಬೆಟ್ಟಕ್ಕೆ ಹೊಂದಿಕೊಂಡಿರುವ ಹಿರೋಡೆ ಕೆರೆಗೆ 250 ವರ್ಷಗಳ ಇತಿಹಾಸವಿದೆ. ಅಂದಿನಿಂದಲೂ, ಈ ಕೆರೆ ನೀರಿನ ಮೇಲೆ ಅವಲಂಬಿತರಾಗಿರುವ ನೂರಾರು ರೈತರು ತಮ್ಮ ಸಾವಿರಾರು ಎಕರೆ ಪ್ರದೇಶದಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಾವಿರಾರು ರೈತರ ಬದುಕಿಗೆ ಆಸರೆಯಾಗಿರುವ ಕೆರೆಯನ್ನು ಉಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿರುವ ಪರಿಣಾಮ ಕೆರೆ ಏರಿ ಬಿರುಕು ಬಿಟ್ಟು ನೀರು ಸೋರಿಕೆಯಾಗುತ್ತಿದೆ. ಇದರಿಂದ ಕೆರೆ ಏರಿ ಒಡೆಯುವ ಸಂಭವವಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಕೆರೆ ಏರಿ ಮೇಲೆ ಗಿಡಗಂಟಿಗಳು ಬೆಳೆದು ಹಾಳಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಇದನ್ನು ತೆರವುಗೊಳಿಸಿ ಕೆರೆ ರಕ್ಷಣೆಗೆ ಆದ್ಯತೆ ನೀಡಬೇಕು. ಆದರೆ ಈ ಕೆಲಸ ಆಗುತ್ತಿಲ್ಲ. ಇದರ ಪರಿಣಾಮವಾಗಿ ಕೆರೆ ಬಿರುಕು ಬಿಟ್ಟಿದೆ. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬುವಂತೆ ಕೆರೆ ಬಿರುಕು ಬಿದ್ದ ಮೇಲೆ ಏರಿ ಸ್ವಚ್ಛ ಮಾಡುವ ಕೆಲಸ ಮಾಡಲಾಗುತ್ತಿದೆ. ಕೆರೆ ಸಂರಕ್ಷಣೆ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ಏರಿ ದುರಸ್ತಿ ಮಾಡುವ ಕೆಲಸವನ್ನು ಅಧಿಕಾರಿಗಳು ತಕ್ಷಣ ಮಾಡಬೇಕು. ಕೆರೆ ಏರಿ ದುರಸ್ತಿಗೆ ಡಿಪಿಆರ್ ಮಾಡಲಾಗಿದೆ ಎಂಬ ಮಾಹಿತಿ ಇದೆ. ತಕ್ಷಣವೇ ಟೆಂಡರ್ ಕರೆದ ಏರಿ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಹಿರೋಡೆ ಕೆರೆ ನೀರು ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಆರ್.ಕೇಶವ, ಪದಾಧಿಕಾರಿಗಳಾದ ಜನಾರ್ದನ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net