ಅಧ್ಯಯನ ಕೇಂದ್ರ ಸ್ಥಾಪನೆಗೆ ಆಗ್ರಹ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮಂಡ್ಯ ನಗರದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಂಡ್ಯ ನಗರದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಲ್ವಡಿ ಕೃಷ್ಣರಾಜ ಒಡೆಯರ್, ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಿ
  • ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕು
  • ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ
ಮಂಡ್ಯ: ಮಂಡ್ಯ ವಿಶ್ವವಿದ್ಯಾಲಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ಬಜೆಟ್‌ನಲ್ಲಿ ಅನುದಾನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸರ್‌ಎಂ.ವಿ.ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು. ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕು. ಎಲ್ಲ ಹೋಬಳಿ ಕೇಂದ್ರ ಸ್ಥಾನದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ಬರಗಾಲ ನಿರ್ವಹಣೆ ಮಾಡಲು ಎಲ್ಲ ಕೆರೆಗಳನ್ನು ಹೂಳೆತ್ತಿಸಿ ನೀರು ತುಂಬಿಸಬೇಕು. ಕೆರೆ ಸುತ್ತಲು ಅರಣ್ಯ ಸಸಿ ನೆಟ್ಟು ಪೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ರೈತರ ಜೀವನಾಡಿಯಾದ ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸದೆ ಒಂದೇ ಕಂತಿನಲ್ಲಿ ಆಧುನೀಕರಣಗೊಳಿಸಲು ಅನುದಾನ ಘೋಷಿಸಬೇಕು. ಕಬ್ಬು ಅರೆಯಲು ಸಮರ್ಪಕ ಕ್ರಮ ವಹಿಸಬೇಕು. ಪ್ರತಿ ಟನ್ ಕಬ್ಬಿಗೆ ಕನಿಷ್ಟ ಬೆಂಬಲ ಬೆಲೆಯಾಗಿ 5,000 ರೂ ನೀಡಬೇಕು. ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಜಿಲ್ಲೆಯ ನೀರಾವರಿ ಜೀವನಾಡಿಯಾದ ಹೇಮಾವತಿ ನದಿ ಕೊಳ್ಳದ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕಾವೇರಿ ನೀರು ಸದ್ಬಳಕೆ ಸಂಶೋಧನೆ ಮತ್ತು ತರಬೇತಿ ಕೇಂದ್ರ ತೆರೆದು ನೀರು ಬಳಕೆದಾರರಿಗೆ ಆಧುನಿಕ ತಂತ್ರಜ್ಞಾನ ಬಳಸಿ ನೀರು ಬಳಕೆ ಅರಿವು ನೀಡಬೇಕು. ರಾಜ್ಯ ಸರ್ಕಾರದ ಮೌಢ್ಯಾಚರಣೆಯಾದ ಕಾವೇರಿ ಆರತಿ ಕೈಬಿಟ್ಟು ರಾಜ್ಯ ಸರ್ಕಾರ ಈ ಅನುದಾನವನ್ನೇ ಕಾವೇರಿ ನೀರು ಸದ್ಬಳಕೆ ಸಂಶೋಧನೆ ಮತ್ತು ತರಬೇತಿ ಕೇಂದ್ರ ತೆರೆಯಲು ಬಳಕೆ ಮಾಡಬೇಕು. ಜಿಲ್ಲೆಯಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕಾಗಿ ತಲಾ 10 ಎಕರೆ ಜಮೀನು ನೀಡಿ ಪ್ರಸ್ತುತ ಬಜೆಟ್‌ನಲ್ಲಿ 10 ಕೋಟಿ ರೂ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಮುಖಂಡರಾದ ಕೆ.ಎಂ.ಅನಿಲ್‌ಕುಮಾರ್, ಬಿ.ಆನಂದ್, ಸುಶ್ಮಿತಾ ಜಿ.ಹೊಸಹಳ್ಳಿ, ನಾಗರಾಜ್, ಸಿದ್ದಯ್ಯ, ಶರಾವತಿ, ಸುಧಾ, ಸತ್ಯಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net