ಕಿಕ್ಕೇರಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಟೀಕೆ ಮಾಡುವ ಪ್ರವೃತ್ತಿಯನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಬಿಡಬೇಕೆಂದು ಶಾಸಕ ಎಚ್.ಟಿ.ಮಂಜು ಹೇಳಿದರು.
ಹೋಬಳಿಯ ಆನೆಗೊಳ ಗ್ರಾಮದಲ್ಲಿ ಹೇಮಾವತಿ ಶುಗರ್ಸ್ ಕಾರ್ಖಾನೆ ನಿರ್ದೇಶಕರ ಚುನಾವಣೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೆ.ಬಿ.ಚಂದ್ರಶೇಖರ್ ಅವಿವೇಕದಿಂದ ದೇವೇಗೌಡರನ್ನು ಮೂದಲಿಸುವುದು ತರವಲ್ಲ. ವಿಶ್ವ ಮಟ್ಟದಲ್ಲಿ ಅವರಿಗೆ ಗೌರವವಿದೆ. ಇವರ ಕೀಳು ಮಟ್ಟದ ಮಾತಿನಿಂದಾಗಿ ತಾಲೂಕಿನ ಮತದಾರರು 15ವರ್ಷಗಳಿಂದ ಮನೆಯಲ್ಲಿ ಕೂರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು, ಹೊರ ರಾಜ್ಯಗಳ ರಾಜಕೀಯ ಮುಖಂಡರು ದೇವೇಗೌಡರಿಗೆ ಗೌರವ ಕೊಟ್ಟು ಮಾತನಾಡುತ್ತಾರೆ. ಇನ್ನಾದರೂ ತಮ್ಮ ವ್ಯಕ್ತಿತ್ವ ಬದಲಾಯಿಸಿಕೊಳ್ಳಿ ಎಂದರು.
ಇಷ್ಟು ಸಾಲದಂತೆ ಎಚ್.ಡಿ.ಕುಮಾರಸ್ವಾಮಿ ಅವರ ಕುರಿತು ಲಘುವಾಗಿ ಮಾತನಾಡುತ್ತೀರಿ. ನಿಖಿಲ್ ಕುಮಾರಸ್ವಾಮಿ ಕುಟುಂಬದ ಗೌರವ ಉಳಿಸಿಕೊಂಡು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವುದು ದೊಡ್ಡ ಸಾಹಸ. ಹೀಗಿರುವಾಗ ದೇವೇಗೌಡರು 50 ವರ್ಷದಿಂದ ಪಕ್ಷವನ್ನು ಉಳಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಧೂಳಪಟವಾಗುವ ಕಾಲ ಸನ್ನಿಹಿತವಾಗಿದೆ. ಗೌರವದಿಂದ ವರ್ತಿಸಿ ಟೀಕೆ-ಟಿಪ್ಪಣೆ ಮಾಡುವ ಮೊದಲು ನಾಲಿಗೆ ಹಿಡಿತವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.