ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕಾರ

 ಶ್ರೀ ಬಾಲಭೈರಶ್ವರ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ,   ವಕೀಲ ಅರವಿಂದ್ ರಾಘವನ್ ಪಾಂಡವಪುರ  ತಾಲೂಕಿನ ವಿವಿಧ ಶಾಲೆಗಳಿಗೆ  ಭೇಟಿ ನೀಡಿ, ವಿವಿಧ ಸಲಕರಣೆಗಳ ಖರೀದಿಗೆ ಧನ ಸಹಾಯ ಮಾಡಿದರು. ಎಚ್.ಎನ್.ಮಂಜುನಾಥ್, ಎಸ್.ಎನ್.ಕೆಂಪೇಗೌಡ, ಎಂ.ಡಿ.ಮರಿಸ್ವಾಮಿಗೌಡ, ಆರ್.ಸಿ.ನಾಗೇಗೌಡ ಇದ್ದರು.
ಶ್ರೀ ಬಾಲಭೈರಶ್ವರ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ವಕೀಲ ಅರವಿಂದ್ ರಾಘವನ್ ಪಾಂಡವಪುರ ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ವಿವಿಧ ಸಲಕರಣೆಗಳ ಖರೀದಿಗೆ ಧನ ಸಹಾಯ ಮಾಡಿದರು. ಎಚ್.ಎನ್.ಮಂಜುನಾಥ್, ಎಸ್.ಎನ್.ಕೆಂಪೇಗೌಡ, ಎಂ.ಡಿ.ಮರಿಸ್ವಾಮಿಗೌಡ, ಆರ್.ಸಿ.ನಾಗೇಗೌಡ ಇದ್ದರು.
Published on
ಪಾಂಡವಪುರ : ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಶ್ರೀ ಬಾಲಭೈರಶ್ವರ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಒದಗಿಸಲಾಗುವುದು. ಶಿಕ್ಷಕರು ಮತ್ತು ಗ್ರಾಮಸ್ಥರು ಈ ಅನುದಾನ ಸದ್ಬಳಕೆ ಮಾಡಿಕೊಂಡು ಮಕ್ಕಳ ದಾಖಲಾತಿ ಹೆಚ್ಚಿಸುವ ಮೂಲಕ ಸರ್ಕಾರಿ ಶಾಲೆ ಉಳಿವಿಗೆ ಮುಂದಾಗಬೇಕು ಎಂದು ಟ್ರಸ್ಟ್‌ನ ಅಧ್ಯಕ್ಷ, ವಕೀಲ ಅರವಿಂದ್ ರಾಘವನ್ ಹೇಳಿದರು.
ತಾಲೂಕಿನ ಡಾಮಡಹಳ್ಳಿ, ಗಿರಿಯಾರಹಳ್ಳಿ, ಚಲುವರಸನಕೊಪ್ಪಲು, ಮಾಣಿಕ್ಯನಹಳ್ಳಿ, ಗೌಡಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜಕ್ಕನಹಳ್ಳಿ ಸರ್ಕಾರಿ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ, ವಿವಿಧ ಸಲಕರಣೆಗಳ ಖರೀದಿಗೆ ಶನಿವಾರ ಧನ ಸಹಾಯ ನೀಡಿ ಮಾತನಾಡಿದರು.
2006ರಿಂದ ಪಾಂಡವಪುರ ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಮ್ಮ ಟ್ರಸ್ಟ್ ವತಿಯಿಂದ ಸಾಕಷ್ಟು ಅನುದಾನ ನೀಡಲಾಗಿದೆ. ಈವರೆಗೆ ಒಟ್ಟು 85ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಹಾಗೂ 156ಕ್ಕೆ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಅನುದಾನ ಒದಗಿಸಲಾಗಿದೆ. ಮತ್ತಷ್ಟು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಮನವಿ ಬಂದಿದ್ದು, ಮುಂದಿನ ದಿನಗಳಲ್ಲಿ ಅವುಗಳ ಅಭಿವೃದ್ಧಿಗೂ ಟ್ರಸ್ಟ್ ವತಿಯಿಂದ ಅನುದಾನ ನೀಡಲಾಗುವುದು ಎಂದರು.
ತಾಲೂಕಿನ ಸಣಬ, ಮಾಣಿಕ್ಯಹಳ್ಳಿ, ಗೌಡಗೆರೆ ಸೇರಿದಂತೆ ಇತರ ಸರ್ಕಾರಿ ಶಾಲೆಗಳನ್ನೂ ಖಾಸಗಿ ಶಾಲೆಗಿಂತಲೂ ಮಿಗಿಲಾಗಿ ಅಭಿವೃದ್ಧಿಪಡಿಸಲಾಗಿದೆ. ಜಕ್ಕನಹಳ್ಳಿ ಪ್ರೌಢಶಾಲೆಯಲ್ಲಿ ಬ್ಯಾಂಡ್ ಸೆಟ್ ಮತ್ತು ಆಟದ ಸಾಮಗ್ರಿಗೆ ಧನ ಸಹಾಯ ನೀಡಲಾಗಿದ್ದು, ಮತ್ತಷ್ಟು ಧನ ಸಹಾಯ ನೀಡಲಾಗುತ್ತದೆ. ಗ್ರಾಮಸ್ಥರು, ಶಿಕ್ಷಕರು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಹಣ ಸಂಗ್ರಹ ಅಭಿಯಾನ :ಸರ್ಕಾರಿ ಶಾಲೆಗಳ ಉಳಿವಿಗೆ ಪ್ರತಿ ಗ್ರಾಮದಲ್ಲೂ ಗ್ರಾಮಸ್ಥರಿಂದ ಹಣ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ. ಗ್ರಾಮಸ್ಥರು 100 ರೂ. ಗಿಂತಲೂ ಹೆಚ್ಚಿನ ಹಣ ಸಂಗ್ರಹ ಮಾಡಿದರೆ ಆ ಹಣದ ಜತೆಗೆ ನಮ್ಮ ಟ್ರಸ್ಟ್‌ನಿಂದ ಹೆಚ್ಚಿನ ಹಣ ಒದಗಿಸಿ ಶಾಲೆ ಅಭಿವೃದ್ಧಿಗೆ ಮುಂದಾಗುವುದು ಎಂದ ಅವರು, ಸ್ಥಳೀಯ ಗ್ರಾಮಸ್ಥರಿಗೆ ಜವಾಬ್ದಾರಿಗಷ್ಟೆ ಈ ಹಣ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ. ಈ ಕುರಿತು ಅನ್ಯತಾ ಭಾವಿಸಬಾರದು ಎಂದರು.
ಈ ವೇಳೆ ತಾಲೂಕಿನ ಗಿರಿಯಾರಹಳ್ಳಿ ಸರ್ಕಾರಿ ಶಾಲೆ ಶಿಕ್ಷಕರು ಹಾಗೂ ಗ್ರಾಮಸ್ಥರು ಸ್ಥಳದಲ್ಲೇ 37 ಸಾವಿರ ರೂ.ಗೂ ಹೆಚ್ಚು ಹಣ ಸಂಗ್ರಹಿಸಿದರು. ಅದೇ ರೀತಿ ಡಾಮಡಹಳ್ಳಿ ಸರ್ಕಾರಿ ಶಾಲೆ ಶಿಕ್ಷಕರು, ಗ್ರಾಮಸ್ಥರು ಸ್ಥಳದಲ್ಲೇ 4 ಸಾವಿರ ರೂ.ಗೂ ಹೆಚ್ಚು ಹಣ ಸಂಗ್ರಹಿಸಿದರು. ಬಳಿಕ ಗೌಡಗೆರೆ ಸರ್ಕಾರಿ ಶಾಲೆ ಶಿಕ್ಷಕರು, ಗ್ರಾಮಸ್ಥರು ಸ್ಥಳದಲ್ಲೇ 45 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿ ಅಭಿಯಾನಕ್ಕೆ ಸಹಕರಿಸಿದರು.
ಇದೇ ವೇಳೆ ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಿಪ್ಪು ವಾರಿಯರ್ಸ್ ಸೀಜನ್-2 ವತಿಯಿಂದ ಆಯೋಜಿಸಿರುವ ಪ್ರೀಮಿಯರ್ ಲೀಗ್ ಸೀಜನ್-2 ಕ್ರಿಕೆಟ್ ಪಂದ್ಯಾವಳಿಗೆ ಅರವಿಂದ್ ರಾಘವನ್ ಅವರು ಧನ ಸಹಾಯ ನೀಡುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.
ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ, ಮಾಜಿ ಅಧ್ಯಕ್ಷ ಎಂ.ಡಿ.ಮರಿಸ್ವಾಮಿಗೌಡ, ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರ್.ಸಿ.ನಾಗೇಗೌಡ, ಹರವು ಶಾಲೆ ಶಿಕ್ಷಕ ಡಿ.ಶಿವಣ್ಣ, ಗೌಡಗೆರೆ ಶಾಲೆ ಶಿಕ್ಷಕ ವೆಂಕಟೇಶ್, ಚಲುವರಸನಕೊಪ್ಪಲು ಶಾಲೆ ಶಿಕ್ಷಕ ಕುಮಾರ್,ಮುಖಂಡರಾದ ಡಾಮಡಹಳ್ಳಿ ಸ್ವಾಮಿಗೌಡ, ಪ್ರಭು, ಗೌಡಗೆರೆ ರಮೇಶ್, ಮಧು ಬಿ.ಗೌಡ, ಸರ್ಕಾರಿ ಶಾಲೆ-ನಮ್ಮವ್ವ ಪಾದಯಾತ್ರೆ ರೂವಾರಿ ಸಂತೋಷ್, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಇತರರಿದ್ದರು.
ಇದಕ್ಕೂ ಮುನ್ನ ಅರವಿಂದ್ ರಾಘವನ್ ಅವರಿಗೆ ಗ್ರಾಮಸ್ಥರು ಹಾಗೂ ಮಕ್ಕಳು ಬೆಲ್ಲದ ಆರತಿ ಬೆಳಗಿ ಆತ್ಮೀಯವಾಗಿ ಅಭಿನಂದಿಸಿ, ಸಾವಯವ ಬೆಲ್ಲ ನೀಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net