ಉತ್ಸವ ಬೀದಿಗಳಲ್ಲಿ ವಾಹನ ನಿಲುಗಡೆ ನಿಯಂತ್ರಿಸಿ

ಮೇಲುಕೋಟೆ ದೇವಾಲಯದ ಸುತ್ತ ಭಕ್ತರವಾಹನ ನಿಲುಗಡೆಯಿಂದಾಗಿ ವಾಹನದಟ್ಟಣೆ ಉಂಟಾಗಿರುವ ದೃಶ್ಯಗಳು
ಮೇಲುಕೋಟೆ ದೇವಾಲಯದ ಸುತ್ತ ಭಕ್ತರವಾಹನ ನಿಲುಗಡೆಯಿಂದಾಗಿ ವಾಹನದಟ್ಟಣೆ ಉಂಟಾಗಿರುವ ದೃಶ್ಯಗಳು
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಪಿ ಶೋಭಾರಾಣಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ
ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ಮತ್ತು ಉತ್ಸವ ಬೀದಿಗಳಲ್ಲಿ ಭಕ್ತರ ವಾಹನ ನಿಲುಗಡೆ ನಿಯಂತ್ರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚಿಸಿದರು.
ಮೇಲುಕೋಟೆಯಲ್ಲಿ ಕಾರ್ಯಕ್ರಮಕ್ಕೆ ಬರುತ್ತಿದ್ದ ವೇಳೆ ದೇವಾಲಯದ ಸುತ್ತ ಉಂಟಾಗಿದ್ದ ವಾಹನ ದಟ್ಟಣೆ ಅವ್ಯವಸ್ಥೆಯನ್ನು ಶಾಸಕರು ಗಮನಿಸಿದರು.
ಶನಿವಾರ, ಭಾನುವಾರ ಮತ್ತು ರಜಾ ದಿನಗಳಂದು ಭಕ್ತರ ವಾಹನದಟ್ಟಣೆ ನಿಯಂತ್ರಿಸಲು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಭಕ್ತರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮೇಲುಕೋಟೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಸೂಚನೆ ನೀಡಿದರು.
ಮಾ.23ರಿಂದ ಏ.4ರವರೆಗೆ ವೈರಮುಡಿ ಬ್ರಹ್ಮೋತ್ಸವ ನಡೆಯಲಿದ್ದು, ಚೆಲುವನಾರಾಯಣಸ್ವಾಮಿಗೆ ಪ್ರತಿನಿತ್ಯ ವಿಶೇಷ ಉತ್ಸವಗಳು ಮತ್ತು ವಾಹನೋತ್ಸವಗಳು ನೆರವೇರುತ್ತದೆ. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಉತ್ಸವಕ್ಕೆ ಅಡಚಣೆಯಾಗುತ್ತಿದೆ. ಹಾಗಾಗಿ ಉತ್ಸವ ಬೀದಿಗಳಲ್ಲಿ ಯಾವುದೇ ವಾಹನಗಳು ನಿಲುಗಡೆಯಾಗದಂತೆ ಮೇಲುಕೋಟೆ ಪೊಲೀಸರು ಕ್ರಮ ಜರುಗಿಸಬೇಕು. ಈ ಸಂಬಂಧ ಯಾವುದೇ ದೂರು ಬರದಂತೆ ಪೊಲೀಸರು ಮತ್ತು ಗ್ರಾಮ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದೂ ಪಾಂಡವಪುರ ಸರ್ಕಲ್ ಇನ್‌ಸ್ಪೆಕ್ಟರ್ ಶರತ್, ಶ್ರೀರಂಗಪಟ್ಟಣ ಡಿವೈಎಸ್‌ಪಿ ಹಾಗೂ ಮೇಲುಕೋಟೆ ಪೊಲೀಸರಿಗೆ ಶಾಸಕರು ಸೂಚನೆ ನೀಡಿದರು.
ಮಾ.28ರಂದು ವೈರಮುಡಿ ಉತ್ಸವ ನಡೆಯಲಿದ್ದು, ಕಣಿವೆಯ ಬಳಿ ಕಂಬಗಳನ್ನು ನೆಟ್ಟು ಬೀದಿ ದೀಪಗಳನ್ನು ಅಳವಡಿಸಬೇಕು. ಚೆಲುವನಾರಾಯಣಸ್ವಾಮಿ ಉತ್ಸವ ಬೀದಿಗಳಲ್ಲಿರುವ ತೆರೆದ ಚರಂಡಿಗಳ ಮೇಲ್ಭಾಗ ತಾತ್ಕಾಲಿಕವಾಗಿ ಮುಚ್ಚಿ ಭಕ್ತರು ಚರಂಡಿಗೆ ಬೀಳದಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪರಮೇಶ್ ಗೌಡ, ಸದಸ್ಯರಾದ ಪುಟ್ಟಸ್ವಾಮಿಗೌಡ ಕಾಡೇನಹಳ್ಳಿ ಸತೀಶ್, ಡಾ.ಪ್ರೀತಿಮಹದೇವ್, ರಾಜು, ಮೇಲುಕೋಟೆ ಗ್ರಾ.ಪಂ ಪಿಡಿಒ ರಾಜೇಶ್ವರ್ ಇತರರು ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net