ಕೆ.ಎಂ.ದೊಡ್ಡಿ: ಸಮೀಪದ ಕೂಳಗೆರೆಯಲ್ಲಿ 16 ಕೋಟಿ ರೂ. ವೆಚ್ಚದ 66 /11 ಕೆ.ವಿ.ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಶಾಸಕ ಕದಲೂರು ಉದಯ್ ಇತ್ತೀಚೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಈ ಯೋಜನೆಯಿಂದಾಗಿ ಕೂಳಗೆರೆ, ಕೊಕ್ಕರೆ ಬೆಳ್ಳೂರು, ಬನ್ನಹಳ್ಳಿ, ಬಸವೇಗೌಡನ ದೊಡ್ಡಿ, ಹುಲಿಕೆರೆ, ಅರೆಕಲ್ಲುದೊಡ್ಡಿ, ಚುಂಚಗನಹಳ್ಳಿ, ಗೊಲ್ಲರದೊಡ್ಡಿ, ಅಂಕೇಗೌಡನ ದೊಡ್ಡಿ, ಹೊಸದೊಡ್ಡಿ, ಅರುವನಹಳ್ಳಿ, ತೊಪ್ಪನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದರು.
ಕೂಳಗೆರೆಯ ಭಾಗದ ಹತ್ತಾರು ಗ್ರಾಮಗಳ ರೈತರು ಹಿಂದಿನಿಂದಲೂ ನೀರು ಹಾಗೂ ವಿದ್ಯುತ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಈ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿಯೇ 16 ಕೋಟಿ ರೂ. ವೆಚ್ಚದ ವಿದ್ಯುತ್ ವಿತರಣಾ ಉಪ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದೇನೆ. ಇದರಿಂದ ಸುತ್ತಮುತ್ತಲಿನ ಗ್ರಾಮದ ಜನರಿಗೆ ಸಮರ್ಪಕ ವಿದ್ಯುತ್ ಸಿಗುವುದರ ಜತೆಗೆ, ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ ಎಂದು ತಿಳಿಸಿದರು.
ಅಲ್ಲದೆ ಶೀಘ್ರದಲ್ಲೇ ಉದ್ಘಾಟನೆಯಾಗಲಿರುವ ಬನ್ನಹಳ್ಳಿ ಏತ ನೀರಾವರಿ ಯೋಜನೆಗೂ ಇದರಿಂದ ಅನುಕೂಲವಾಗಲಿದ್ದು, ಆ ಮೂಲಕ ಹತ್ತಾರು ಗ್ರಾಮಗಳ ಕೆರೆಗಳನ್ನು ತುಂಬಿಸಲು ಪ್ರಯೋಜನವಾಗಲಿದೆ. ಇದರಿಂದಾಗಿ ರೈತರಿಗೆ ವ್ಯವಸಾಯ ಮಾಡಲು ನೀರು ಸಿಗಲಿದ್ದು, ಇದರ ಜತೆಗೆ ಅಂತರ್ಜಲ ಕೂಡ ವೃದ್ಧಿಯಾಗಲಿದೆ. ಮುಂದಿನ ವರ್ಷ ಮದ್ದೂರು ಬಳಿ 220 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆ ವೇಳೆಗೆ ಈ ವಿದ್ಯುತ್ ಉಪಕೇಂದ್ರದ ಕಾಮಗಾರಿಯೂ ಪೂರ್ಣಗೊಳ್ಳಲಿದೆ. ಮುಂದಿನ ವರ್ಷದಿಂದ ವಿದ್ಯುತ್ ಹಾಗೂ ನೀರಾವರಿ ವಿಷಯದಲ್ಲಿ ಈ ಭಾಗದ ಜನರು ನೆಮ್ಮದಿ ಕಾಣಲಿದ್ದಾರೆ ಎಂದರು.
ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಲುವರಾಜು, ಮುಖಂಡರಾದ ಕೆಂಪರಾಜು, ಅರುವನಹಳ್ಳಿ ಸಿದ್ದರಾಜು, ಜಯರಾಮು, ಸಿಪಾಯಿ ಶ್ರೀನಿವಾಸ್, ಅಧಿಕಾರಿಗಳು ಇದ್ದರು.