ಸಾಹಿತ್ಯ, ಮಾಧ್ಯಮ ಒಂದೇ ನಾಣ್ಯದ ಮುಖಗಳಿದ್ದಂತೆ: ಜಿಲ್ಲಾಧಿಕಾರಿ ಡಾ.ಕುಮಾರ ಅಭಿಮತ

ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯಪತ್ರಕರ್ತ ಡಿ.ಎನ್.ಶ್ರೀಪಾದು ದಂಪತಿಯನ್ನು ಅಭಿನಂದಿಸಲಾಯಿತು.
ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯಪತ್ರಕರ್ತ ಡಿ.ಎನ್.ಶ್ರೀಪಾದು ದಂಪತಿಯನ್ನು ಅಭಿನಂದಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಕರ್ನಾಟಕ ಸಂಘದಲ್ಲಿ ಅಭಿನಂದನಾ ಸಮಾರಂಭ
  • ಡಿ.ಎನ್.ಶ್ರೆಪಾದು ಹಿತೈಷಿ ಬಳಗದ ವತಿಯಿಂದ ಆಯೋಜನೆ
ಮಂಡ್ಯ: ಹಳೆಯ ಬೇರು-ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬ ಡಿವಿಜಿ ಅವರ ಮಾತಿನಂತೆ ಹಿರಿಯರ ಆದರ್ಶಗಳು ಕಿರಿಯರಿಗೆ ಮಾರ್ಗದರ್ಶಕವಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಿ.ಎನ್.ಶ್ರೆಪಾದು ಹಿತೈಷಿ ಬಳಗದ ವತಿಯಿಂದ ಆಯೋಜಿಸಿದ್ದ ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಅವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಮತ್ತು ಮಾಧ್ಯಮ ಒಂದೇ ನಾಣ್ಯದ ಎರಡು ಮುಖಗಳು. ಮಾಧ್ಯಮ ಯಾವಾಗಲು ಸಮಾಜದ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಬೇಕು. ಸಮಾಜದ ಋಣ ತೀರಿಸುವ ಕೆಲಸ ಮಾಡಿದಾಗ ಬದುಕು ಸಾರ್ಥಕವಾಗುತ್ತದೆ. ಒಳ್ಳೆಯ ಸಾಧನೆಗಳು ಸಮಾಜದ ಬೆಳವಣಿಗೆಗೆ ಪೂರಕವಾಗಿರುತ್ತವೆಯಲ್ಲದೆ, ಮುಂದಿನ ಪೀಳಿಗೆಗೂ ದಾರಿದೀಪವಾಗಿರುತ್ತವೆ ಎಂದರು.
ಚಿತ್ರನಟ ಮಂಡ್ಯ ರಮೇಶ್ ಮಾತನಾಡಿ, ಡಿ.ಎನ್.ಶ್ರೀಪಾದು ಅವರೊಂದಿಗಿನ ಸ್ನೇಹ ಐವತ್ತು ವರ್ಷ ಹಳೆಯದು. ಚಿಕ್ಕಂದಿನಿಂದಲೂ ಅವರಲ್ಲಿ ಉತ್ತಮವಾದ ಸಂಘಟನಾ ಚಾತುರ್ಯವಿದೆ. ಕೈಯ್ಯಲ್ಲಿ ಹಣವಿಲ್ಲದಿದ್ದರೂ ಏನನ್ನಾದರೂ ಸಾಧಿಸಬೇಕೆಂಬ ಹಠ, ಛಲ, ಹಂಬಲವಿತ್ತು. ಗಟ್ಟಿಯಾದ ನಿಲುವು, ಸ್ನೇಹಶೀಲ ವ್ಯಕ್ತಿತ್ವ, ಸದಾ ಒಳ್ಳೆಯದನ್ನೇ ಬಯಸುವಂತಹ ಗುಣ ಇವೆಲ್ಲವೂ ನನಗೆ ಬಹಳ ಅಚ್ಚುಮೆಚ್ಚು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಬಡತನದಿಂದ ಹುಟ್ಟಿ ಬೆಳೆದುಬಂದ ಶ್ರೀಪಾದು ಅವರು ಎಂದಿಗೂ ಪತ್ರಿಕಾಧ್ಯೇಯವನ್ನು ಮರೆಯಲಿಲ್ಲ. ಸಂಘಟನಾಶೀಲತೆ, ಸಂಯಮವನ್ನು ಜೀವನದುದ್ದಕ್ಕೂ ಬೆಳೆಸಿಕೊಂಡು ಬಂದರು. ಹಿರಿಯ ಸಾಹಿತಿಗಳು, ರಾಜಕಾರಣಿಗಳು, ಹೋರಾಟಗಾರರ ಒಡನಾಟವನ್ನು ಹೊಂದಿರುವ ಡಿ.ಎನ್.ಶ್ರೀಪಾದು ಉತ್ತಮ ಜ್ಞಾನವನ್ನು ಸಂಪಾದಿಸಿಕೊಂಡಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಅವರ ಕಾರ್ಯಶೈಲಿ ನಿಜಕ್ಕೂ ಮಾದರಿಯಾದುದು ಎಂದರು.
ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸೃಜನಶೀಲ ವ್ಯಕ್ತಿತ್ವದೊಂದಿಗೆ ಯಾರ ಸಹವಾಸಕ್ಕೂ ಹೋಗದೆ ತಮ್ಮಪಾಡಿಗೆ ತಾವು ಲೇಖನಗಳನ್ನು ಬರೆದುಕೊಂಡು ಎಲೆಮರೆ ಕಾಯಿಯಂತೆಯೇ ಡಿ.ಎನ್.ಶ್ರೀಪಾದು ಉಳಿದುಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮತ್ತು ಮಾಜಿ ನಿರ್ದೇಶಕ ಎಂ.ಕೃಷ್ಣ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಸಿ.ಮಂಜುನಾಥ್, ಕೆ.ಎನ್.ಮಂಜುನಾಥ, ಕೆ.ಶ್ರೀನಿವಾಸ್, ಸಿ.ಎನ್.ಮಂಜುನಾಥ, ಬಿ.ಟಿ.ಮೋಹನ್‌ಕುಮಾರ್, ಮಧು ಕ್ಯಾತಘಟ್ಟ, ರವಿಸಾವಂದಿಪುರ ಇತರರಿದ್ದರು. ಕಾರ್ಯಕ್ರಮದಲ್ಲಿ ಹಿರಿಯಪತ್ರಕರ್ತ ಡಿ.ಎನ್.ಶ್ರೀಪಾದು ದಂಪತಿಯನ್ನು ಅಭಿನಂದಿಸಲಾಯಿತು. ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಧ್ವನಿ ಸಂದೇಶವನ್ನು ಕೇಳಿಸಲಾಯಿತು.
ಆದರ್ಶಗಳನ್ನು ಬಿಟ್ಟರೆ ಬದುಕು ನಿರರ್ಥಕ
ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಆದರ್ಶಗಳು ಸಮಾಜದಲ್ಲಿ ಇನ್ನೂ ಜೀವಂತವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ಪಾಲಿಸುವುದನ್ನು ಕಲಿಯಬೇಕು. ಆದರ್ಶಗಳನ್ನು ಬಿಟ್ಟರೆ ಬದುಕು ನಿರರ್ಥಕ. ಆದರ್ಶಗಳಿದ್ದಾಗಲೇ ಮನುಷ್ಯನ ಜೀವನದ ಮೌಲ್ಯ ಹೆಚ್ಚುತ್ತದೆ. ವ್ಯಕ್ತಿತ್ವಕ್ಕೊಂದು ಬೆಲೆ ಬರುತ್ತದೆ. ಡಿ.ಎನ್.ಶ್ರೀಪಾದು ಅವರು ಪತ್ರಕರ್ತರಾಗಿ ಜೀವನದುದ್ದಕ್ಕೂ ಆದರ್ಶಗಳನ್ನಿಟ್ಟುಕೊಂಡು ಮೌಲ್ಯಯುತವಾದ ಜೀವನ ನಡೆಸಿಕೊಂಡು ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಿರಿಯ ಪತ್ರಕರ್ತರು ಬೆಳವಣಿಗೆ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net