ಜಾತ್ರೆಗೆ ಸಹಕರಿಸಿದ ಶಾಸಕ ಉದಯ್‌ಗೆ ಅಭಿನಂದನೆ

ಶ್ರೀಮದ್ದೂರಮ್ಮನಿಗೆ ವಿಶೇಷ ಅಲಂಕಾರ ಮಾಡಿರುವುದು.
ಶ್ರೀಮದ್ದೂರಮ್ಮನಿಗೆ ವಿಶೇಷ ಅಲಂಕಾರ ಮಾಡಿರುವುದು.
Published on
ಮದ್ದೂರು: ಮದ್ದೂರಮ್ಮನ ಜಾತ್ರಾ ಮಹೋತ್ಸವ ಯಶಸ್ವಿಯಾಗಲು ಸಹಕಾರ ನೀಡಿದ ಶಾಸಕ ಕೆ.ಎಂ.ಉದಯ್ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಸರ್ವರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದು ಶ್ರೀ ಮದ್ದೂರಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎಂ.ಸಿ.ನಾಗೇಶ್ ಹಾಗೂ ಕಾರ್ಯದರ್ಶಿ ಸೌಭಾಗ್ಯಾ ಮಹದೇವು ತಿಳಿಸಿದರು.
ಪ್ರತಿ ವರ್ಷಕ್ಕಿಂತ ಈ ವರ್ಷ ಮದ್ದೂರಮ್ಮನ ಕೊಂಡೋತ್ಸವ, ಸಿಡಿ ರಾಯಣ್ಣನ ಉತ್ಸವ, ಓಕುಳಿ ಸೇವೆ, ಪಲ್ಲಕ್ಕಿ ಉತ್ಸವ ಸೇರಿದಂತೆ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮ ಅದ್ದೂರಿಯಾಗಿ ನಡೆದವು. ಇದಕ್ಕೆ ಭಕ್ತಾದಿಗಳು, ಸಾರ್ವಜನಿಕರು ಹಾಗೂ ಟ್ರಸ್ಟ್ ಪದಾಧಿಕಾರಿಗಳ ಸಹಕಾರ ಕಾರಣ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮದ್ದೂರು ಇತಿಹಾಸದಲ್ಲೇ ಪ್ರಥಮ ಬಾರಿಗೆ ಶಾಸಕ ಕೆ.ಎಂ.ಉದಯ್ ತಮ್ಮದೆಯಾದ ಕದಲೂರು ಚಾರಿಟಬಲ್ ಟ್ರಸ್ಟ್ ವತಿಯಿಂದ ಮದ್ದೂರು ಉತ್ಸವ ಹಮ್ಮಿಕೊಂಡು ಮದ್ದೂರಮ್ಮನ ದನಗಳ ಜಾತ್ರೆಯಲ್ಲಿ ಭಾಗವಹಿಸಿದ್ದ ರಾಸುಗಳಿಗೆ ಬಹುಮಾನ ಘೋಷಣೆ ಮಾಡಿದ್ದ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ರಾಸುಗಳು ಜಾತ್ರೆಗೆ ಆಗಮಿಸಿ ಮೆರುಗು ತಂದವು ಎಂದರು.
ಮದ್ದೂರು ಉತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆ, ಕಬಡ್ಡಿ, ವಾಲಿಬಾಲ್ ಪಂದ್ಯಾವಳಿ, ನಗರಾದ್ಯಂತ ವಿದ್ಯುತ್ ದೀಪಾಲಂಕಾರ ಹಾಗೂ ಖ್ಯಾತ ಗಾಯಕರಿಂದ ರಸ ಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಪರಿಣಾಮ ರಾಜ್ಯದ ವಿವಿಧ ಭಾಗಗಳಿಂದ ಮದ್ದೂರಮ್ಮ ಜಾತ್ರೆಗೆ ಹಾಗೂ ಶ್ರೀ ನರಸಿಂಹಸ್ವಾಮಿ ಬ್ರಹ್ಮೋತ್ಸವಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರಲು ಕಾರಣವಾಯಿತು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮುಂದಿನ ವರ್ಷವೂ ಮದ್ದೂರಮ್ಮನ ಜಾತ್ರಾ ಮಹೋತ್ಸವಕ್ಕೆ ಶಾಸಕರು, ಭಕ್ತಾದಿಗಳು, ಸಾರ್ವಜನಿಕರು ಇದೇ ರೀತಿ ಅಗತ್ಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಟ್ರಸ್ಟ್ ಅಧ್ಯಕ್ಷ ಎಂ.ಸಿ.ನಾಗೇಶ್, ಉಪಾಧ್ಯಕ್ಷ ಎಂ.ಎಲ್.ಪ್ರಸಾದ್, ಕಾರ್ಯದರ್ಶಿ ಸೌಭಾಗ್ಯಮಹದೇವು, ಖಜಾಂಚಿ ಎಂ.ಜಿ.ಶಿವನಂಜು, ಟಸ್ಟಿಗಳಾದ ಎಂ.ಮಹದೇವು, ಎಲ್.ತಮ್ಮಣ್ಣಗೌಡ, ಎನ್.ರಾಮಲಿಂಗಯ್ಯ, ಶಿವಣ್ಣ, ನಂಜುಂಡಯ್ಯ, ಎಂ.ಎಂ.ಶಿವಮಾದಯ್ಯ, ಎಂ.ಎ.ಶಿವಲಿಂಗಯ್ಯ, ಎಂ.ಟಿ.ಶಿವಣ್ಣ, ನಾಡಗೌಡ ಪುಟ್ಟಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net