ಜನಮಾನಸದಲ್ಲಿ ದೇವರಾಜ ಅರಸು ಶಾಶ್ವತ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಅಭಿಮತ

ಮಂಡ್ಯ ನಗರದ ಜೆ.ಸಿ. ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪುಣ್ಯ ಸ್ಮರಣೆ ನಡೆಯಿತು.
ಮಂಡ್ಯ ನಗರದ ಜೆ.ಸಿ. ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪುಣ್ಯ ಸ್ಮರಣೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದ ಜೆ.ಸಿ. ವೃತ್ತದಲ್ಲಿ ಆಚರಣೆ
  • ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ಆಚರಣೆ
ಮಂಡ್ಯ: ಡಿ.ದೇವರಾಜ ಅರಸು ಅವರು ನಮ್ಮನ್ನು ಅಗಲಿ 44 ವರ್ಷಗಳಾದರೂ ಇಂದಿಗೂ ಪ್ರಸ್ತುತವಾಗಿದ್ದಾರೆಂದರೆ ಅದಕ್ಕೆ ಕಾರಣ ಅವರಲ್ಲಿನ ಆಡಳಿತ ಬದ್ಧತೆ, ದೂರದೃಷ್ಠಿ ಮತ್ತು ಮಾನವೀಯತೆಯ ತೀರ್ಮಾನಗಳು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಹೇಳಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ವೇದಿಕೆ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ಪರಿವರ್ತನೆಯ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 44ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಜನಪ್ರತಿನಿಧಿಗಳು ಎಷ್ಟು ದಿವಸ ಅಧಿಕಾರದಲ್ಲಿರುತ್ತಾರೆ ಎಂಬುದಕ್ಕಿಂತ ಜನರ ಮನಸ್ಸಿನಲ್ಲಿ ಎಷ್ಟು ಕಾಲ ಉಳಿಯುತ್ತಾರೆ ಎಂಬುದು ಮುಖ್ಯವಾದದ್ದು. ಈ ನಿಟ್ಟಿನಲ್ಲಿ ಅರಸು ಜನರ ಮನಸ್ಸಿನಲ್ಲಿ ಚಿರಸ್ಥಾಯಿ ಎಂದರು.
ಕೃಷಿಕರು, ಶ್ರಮಿಕರು ಮತ್ತು ಅಸಹಾಯಕರ ಬದುಕಿಗೆ ಆಸರೆಯಾದ ಡಿ. ದೇವರಾಜ ಅರಸು ಅವರ ಆಡಳಿತ ಇಂದಿನ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಮಾದರಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಲ್ಲರ್ ಆಯೋಗದ ಮೂಲಕ ಎಲ್ಲ ವರ್ಗದವರಿಗೆ ಶೇ. 75ರ ಮೀಸಲಾತಿಯನ್ನು ಜಾರಿಗೊಳಿಸಿದಂತೆ ಡಿ. ದೇವರಾಜ ಅರಸು ಹಾವನೂರು ವರದಿಯನ್ನು ಅನುಷ್ಠಾನಗೊಳಿಸಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಕಲ್ಪಿಸಿದರು. ಅಂದಿನಿಂದ ಇಂದಿನವರೆಗೂ ಹಲವು ಆಯೋಗಗಳು ರಚನೆಯಾದರೂ, ಅವುಗಳ ವರದಿಯನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆ ನಡೆಸಿಲ್ಲ. ಇದು ಸಾಮಾಜಿಕ ನ್ಯಾಯಕ್ಕೆ ಎಸಗಿದ ಅಪಮಾನವಾಗಿದೆ. ಇತ್ತೀಚೆಗೆ ಸ್ವೀಕಾರಗೊಂಡಿರುವ ಮಧುಸೂಧನ್ ನಾಯಕ್ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ್ ಮಾತನಾಡಿ, ಡಿ. ದೇವರಾಜ ಅರಸು ಅವರು ಸಮಾಜದ ಸುಧಾರಣೆಗೆ ಶ್ರಮಿಸಿದವರು. ಹಳೇ ಮೈಸೂರು ರಾಜ್ಯವನ್ನು ಕರ್ನಾಟಕವೆಂದು ನಾಮಕರಣ ಮಾಡುವ ಮೂಲಕ ಅಖಂಡತೆಯನ್ನು ಪ್ರದರ್ಶಿಸಿದರು. ಅವರ ಆಡಳಿತ ಇಂದಿಗೂ ಪ್ರಸ್ತುತವಾಗಿದೆ ಎಂದು ಬಣ್ಣಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಮಾತನಾಡಿ, ಉಳುವವನಿಗೆ ಭೂಮಿ, ಉಚಿತ ವಿದ್ಯುತ್ ಮತ್ತು ನಿರುದ್ಯೋಗಿಗಳಿಗೆ ಭತ್ಯೆ ನೀಡುವಂತಹ ಹಲವು ಜನಪರ ಕಾರ್ಯಕ್ರಮಗಳನ್ನು ನೀಡಿದಂತಹ ಡಿ. ದೇವರಾಜ ಅರಸು ಅವರು ಎಲ್ಲ ಜನರ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕ ಎಂದು ಬಣ್ಣಿಸಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ. ಕೃಷ್ಣ, ಮುಖಂಡರಾದ ಉಮ್ಮಡಹಳ್ಳಿ ನಾಗೇಶ್, ಎನ್. ದೊಡ್ಡಯ್ಯ, ಡಿ.ರಮೇಶ್, ಸಿ.ಸಿದ್ದಶೆಟ್ಟಿ, ಅಮ್ಜದ್‌ಪಾಷ, ಪ್ರದೀಪ್, ಜವರೇಗೌಡ, ಬಸವರಾಜು, ನಾರಾಯಣಸ್ವಾಮಿ, ಹುರುಗಲವಾಡಿ ರಾಮಯ್ಯ, ಕಲಾವಿದ ಪ್ರಕಾಶ್, ಎಂ.ಎಸ್.ರಾಜಣ್ಣ, ಅನಿಲ್‌ಕುಮಾರ್, ಕಾಂತರಾಜು, ಗುಡಿಗೇನಹಳ್ಳಿ ಚಂದ್ರಶೇಖರ್ ಆರಾಧ್ಯ, ಕಟ್ಟೆ ಕೃಷ್ಣಸ್ವಾಮಿ, ಶಿವಮಾಧು, ಜಯರಾಂ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net