ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಎಂ.ಅಂಕೇಗೌಡ ಅವರನ್ನು ಅಭಿನಂದಿಸಲಾಯಿತು. ಯಮದೂರು ಸಿದ್ದರಾಜು, ಚೇತನ್ ಕುಮಾರ್, ಶೀಲಾ, ಶಿವಶಂಕರ್, ಚಂದ್ರಶೇಖರ್, ಹನುಮಂತಯ್ಯ ಇದ್ದರು.
ವಿದ್ಯಾರ್ಥಿಗಳಿಗೆ ಪದ್ಮಶ್ರೀ ಪುರಸ್ಕೃತ ಎಂ.ಅಂಕೇಗೌಡ ಕಿವಿಮಾತು
ಅಭಿನಂದನಾ ಸಮಾರಂಭ
ಮಳವಳ್ಳಿ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಕ್ಕೆ ಮಾತ್ರ ಬೆಲೆ ಇರುವುದರಿಂದ ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಶಿಕ್ಷಣ ಕೊಡಿಸಿ ಅವರನ್ನೇ ಆಸ್ತಿಯನ್ನಾಗಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಎಂ.ಅಂಕೇಗೌಡ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಶೀಮತಿ ಗೌರಮ್ಮ, ಎಂ.ವಿ ವೆಂಕಟಪ್ಪ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಜ್ಞಾನಧಾರ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಹಿಂದಿನ ದಿನಗಳಲ್ಲಿ ತೋಳ್ಬಲದಿಂದ ರಾಜ್ಯವನ್ನು ನಂತರ ಹಣವಂತರು ಅಧಿಕಾರ ಪಡೆಯುತ್ತಿದ್ದರು. ಆದರೇ ಪ್ರಸ್ತುತ ಕಾಲಮಾನದಲ್ಲಿ ಜ್ಞಾನ ಬಲದಿಂದ ದೇಶದ ಯಾವುದೇ ಅತ್ಯುನ್ನತ ಹುದ್ದೆಗಳನ್ನು ಪಡೆಯಬಹುದಾಗಿದೆ ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ಪುಸ್ತಕಗಳು ಇಲ್ಲದೇ ಪರಿತಪ್ಪಿಸುತ್ತಿದ್ದ ಕಾಲವನ್ನು ನಾನು ಕಂಡಿದ್ದೇನೆ. ಆ ದಿನಗಳಲ್ಲಿ ಈ ಸಮಸ್ಯೆಗಳ ನಿವಾರಣೆ ಮಾಡಬೇಕೆಂದು ಅರಿತು ಗ್ರಾಮೀಣ ವಿದ್ಯಾರ್ಥಿಗಳಿಗೆ ಸುಲಭವಾಗಿ ಪುಸ್ತಕಗಳು ಸಿಗಬೇಕೆಂಬ ಉದ್ದೇಶದಿಂದ ಪುಸ್ತಕಗಳ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡು ವ್ಯವಸ್ಥಿತವಾಗಿ ಪುಸ್ತಕ ಓದುವ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದರು.
ಶೈಕ್ಷಣಿಕ ದಿನಗಳಲ್ಲಿ ಕಲಿಕೆಯ ಜತೆಗೆ ವಿದ್ಯಾರ್ಥಿಗಳು ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು ಎಂದ ಅವರು, ಚಿಕ್ಕವಯಸ್ಸಿನಿಂದಲೇ ಪುಸ್ತಕ ಓದುವ ಹವ್ಯಾಸವನ್ನು ರೂಡಿಸಿಕೊಂಡು ಓದಿದರೇ ಮಾತ್ರ ಉನ್ನತ ಹುದ್ದೆಯನ್ನು ಪಡೆದು ಭವಿಷ್ಯದ ಜೀವನವನ್ನು ಸುಭದ್ರವಾಗಿಸಿಕೊಳ್ಳಬಹುದು ಎಂದರು.
ಭಗವಾನ್ ಬುದ್ದ ಮಹಾವಿದ್ಯಾಲಯ ಅಧ್ಯಕ್ಷ ಯಮದೂರು ಸಿದ್ದರಾಜು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಓದಿನ ಹುಚ್ಚು ಹಿಡಿಸಿದ ಎಂ.ಅಂಕೇಗೌಡರು ಪದ್ಮಶ್ರೀ ಪ್ರಶಸ್ತಿ ಪಡೆದಿರುವುದು ಹೆಮ್ಮೆ ಪಡುವ ಸಂಗತಿಯಾಗಿದ್ದು, ಇಂದಿನ ಯುವ ಪೀಳಿಗೆ ಆದರ್ಶನೀಯ ವಿಷಯಗಳನ್ನು ಮನನ ಮಾಡಿಕೊಂಡು ಸಮಾಜಕ್ಕೆ ಕೊಡುಗೆಯಾಗಿ ಬದುಕುವಂತೆ ಕರೆ ನೀಡಿದರು.
ವಿದ್ಯಾರ್ಥಿಗಳು ಕಲಿಕೆಗೆ ಒತ್ತು ನೀಡಬೇಕು. ಗುರು ಹಿರಿಯರಿಗೆ ಗೌರವ ನೀಡುವಂತಾಗಬೇಕು. ಓದಿನಲ್ಲಿ ಸಾಧನೆಗೈದು ಗ್ರಾಮ ಹಾಗೂ ತಾಲೂಕಿಗೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಚೇತನ್‌ಕುಮಾರ್, ಪ್ರಾಂಶುಪಾಲರಾದ ಜಿ.ಶೀಲಾ, ಶಿವಶಂಕರ್ ಮುಖಂಡರಾದ ಚಂದ್ರಶೇಖರ್, ಹನುಮಂತಯ್ಯ, ಸೇರಿದಂತೆ ಇತರರು ಇದ್ದರು.