ಬೆಳೆ ಸಮೇತ ಒತ್ತುವರಿ ತೆರವು

ಶ್ರೀರಂಗಪಟ್ಟಣ ತಾಲೂಕಿನ ಆಲ್ದಹಳ್ಳಿ ಸರ್ವೇ ನಂ.36ರಲ್ಲಿ ತೆರವು ಕಾರ್ಯ ಮಾಡುತ್ತಿರುವುದು.
ಶ್ರೀರಂಗಪಟ್ಟಣ ತಾಲೂಕಿನ ಆಲ್ದಹಳ್ಳಿ ಸರ್ವೇ ನಂ.36ರಲ್ಲಿ ತೆರವು ಕಾರ್ಯ ಮಾಡುತ್ತಿರುವುದು.
Published on
ಶ್ರೀರಂಗಪಟ್ಟಣ: ತಾಲೂಕಿಗೆ ಉಪ ಲೋಕಾಯುಕ್ತರು ಭೇಟಿ ನೀಡುವ ವೇಳೆಗೆ ಮುಚ್ಚಿ ಹೋಗಿದ್ದ ಪುರಾತನ ಕಾಲದ ರಸ್ತೆ ತೆರವುಗೊಳಿಸಲೇಬೇಕು ಎಂಬ ಹಠಕ್ಕೆ ಬಿದ್ದ ತಾಲೂಕು ಆಡಳಿತ ತರಾತುರಿಯಲ್ಲಿ ರೈತರು ಬೆಳೆದ ಬೆಳೆಗಳನ್ನೇ ಜೆಸಿಬಿ ಮೂಲಕ ತೆರವು ಮಾಡಿದೆ. ಸಂಬಂಧಪಟ್ಟ ರೈತರು ಅಸಹಾಯಕತೆ ವ್ಯಕ್ತಪಡಿಸಿ ಪರಿಹಾರ ಕೊಡಿಸುವಂತೆ ತಾಲೂಕು ಆಡಳಿತದ ಮೊರೆ ಹೋಗಿದ್ದಾರೆ.
ತಾಲೂಕಿನ ಆಲ್ದಹಳ್ಳಿ ಗ್ರಾಮದ ಸರ್ವೇ ನಂ.36ರಲ್ಲಿ ಬಂಡಿ ರಸ್ತೆ (ಗಾಡಿ ಜಾಡು) ಕುರಿತು ದಾಖಲೆಗಳಲ್ಲಿ ಉಲ್ಲೇಖವಿದೆ. ಆದರೆ, ವಾಸ್ತವದಲ್ಲಿ ಈ ಮಾರ್ಗದ 1 ಕಿ.ಮೀ ದೂರದ 20 ಅಡಿ ಅಗಲದ ರಸ್ತೆ ಸಾಕಷ್ಟು ವರ್ಷಗಳಿಂದ ಮುಚ್ಚಿಹೋಗಿತ್ತು. ಮುಚ್ಚಿ ಹೋದ ಜಮೀನಿನ ಸ್ಥಳದಲ್ಲಿ ಆಲ್ದಹಳ್ಳಿ, ಪೀಹಳ್ಳಿ ಹಾಗೂ ಕೊತ್ತತ್ತಿ ಗ್ರಾಮಗಳ ಸುಮಾರು 30ಕ್ಕೂ ಹೆಚ್ಚು ರೈತರು ರಸ್ತೆಯ ಉದ್ದಕ್ಕೂ ಭತ್ತ, ಕಬ್ಬು, ತರಕಾರಿ ಸೇರಿದಂತೆ ಇತರ ಬೆಳೆಗಳನ್ನು ಬೆಳೆದಿದ್ದರು.
ಇತ್ತೀಚೆಗೆ ಗ್ರಾಮದ ನಿವಾಸಿಯೊಬ್ಬರು ಲೋಕಾಯುಕ್ತ ಕಚೇರಿಗೆ ದೂರು ನೀಡಿ ರಸ್ತೆ ತೆರವುಗೊಳಿಸಲು ಕ್ರಮ ವಹಿಸುವಂತೆ ದೂರು ನೀಡಿದ್ದರು. ಈ ಸಂಬಂಧ ಪರಿಶೀಲಿಸಿ ಕ್ರಮವಹಿಸುವಂತೆ ಲೋಕಾಯುಕ್ತರು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದರು.
ಜಿಲ್ಲೆಯಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಪ್ರವಾಸ ಕಾರ್ಯಕ್ರಮ ನಿಗಯಾಗಿದೆ. 21ರಂದು ತಾಲೂಕಿಗೆ ಭೇಟಿ ನೀಡುವ ಮಾಹಿತಿ ಹಿನ್ನೆಲೆ ಅರಿರ ಅಧಿಕಾರಿಗಳು ಜೆಸಿಬಿಗಳ ಮೂಲಕ ಬೆಳೆಗಳ ಸಮೇತ ಒತ್ತುವರಿ ತೆರವು ಮಾಡಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ರೈತರು ಸಂಬಂಧಪಟ್ಟ ಬೆಳೆಗಳನ್ನು 2 ತಿಂಗಳಲ್ಲಿ ಕಟಾವು ಮಾಡಿಕೊಂಡು ಒತ್ತುವರಿಗೆ ಸಹಕಾರ ನೀಡುವುದಾಗಿ ಮನವಿ ಮಾಡಿದರು. ಇದಕ್ಕೆ ಒಪ್ಪದ ಅಧಿಕಾರಿಗಳು ತೆರವು ಕಾರ್ಯ ಮಾಡಿದರು.
ಈ ಸಂಬಂಧ ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ನೇತೃತ್ವದಲ್ಲಿ ಕೃಪೇಶ್, ಮನು ಕೊತ್ತತ್ತಿ, ಯೋಗಿಶ್, ಮೋಹನ್ ಕುಮಾರ್, ಪ್ರಸನ್ನ ಇತರರು ಶಿರಸ್ತೇದಾರ್ ಭೇಟಿ ಮಾಡಿ ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ವತಿಯಿಂದ ನೆರವಾಗುವಂತೆ ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net