ಕಾರ್ಮಿಕ ಸಂಹಿತೆಗಳ ರದ್ಧತಿಗೆ ಆಗ್ರಹ: ಸಿಐಟಿಯು ಕಾರ್ಯಕರ್ತರ ಪ್ರತಿಭಟನೆ

ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
  • ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿಗಳ ಅಧಿಸೂಚನೆ ಪ್ರತಿ ಸುಟ್ಟು ಅಸಮಾಧಾನ
ಮಂಡ್ಯ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಅಂತಿಮ ನಾಲ್ಕು ಕಾರ್ಮಿಕ ಸಂಹಿತೆಗಳ ರದ್ಧತಿಗೆ ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ನಗರದ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿಗಳ ಅಧಿಸೂಚನೆ ಪ್ರತಿ ಸುಟ್ಟು ಹಾಗೂ ಕೇಂದ್ರ ಸರ್ಕಾದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದುಡಿಯುವ ವರ್ಗದ ವಿರುದ್ಧ ಬಿಜೆಪಿ ಸರ್ಕಾರದ ಮಹಾ ವಂಚನೆ ಮಾಡುತ್ತಿದೆ. ದೇಶದಲ್ಲಿ ದುಡಿಯುವ ಜನರ ಇತಿಹಾಸವು ಕೇವಲ ಉದ್ಯೋಗದ ಕಥೆಯಲ್ಲ ಅದು ಹಸಿವು, ಅವಮಾನ, ಹೋರಾಟ ಮತ್ತು ಮಾನವೀಯ ಗೌರವಕ್ಕಾಗಿ ನಡೆದ ದೀರ್ಘ ಹಾದಿಯ ಕಥೆಯಾಗಿದೆ. ಎಂಟು ಗಂಟೆಗಳ ಕೆಲಸದ ಹಕ್ಕಿನಿಂದ ಹಿಡಿದು ಕನಿಷ್ಟ ವೇತನ, ಸಾಮಾಜಿಕ ಭದ್ರತೆ, ಸಂಘಟನೆಯ ಹಕ್ಕು ಮತ್ತು ಮುಷ್ಕರ ಹಕ್ಕುಗಳವರೆಗೆ ಪ್ರತಿಯೊಂದು ಹಕ್ಕು ಕಾರ್ಮಿಕರ ಬೆವರಿನಿಂದ ದೊರೆತಿದೆ. ಈ ಹಕ್ಕು ಯಾರ ದಾನ ಅಲ್ಲ. ಅವು ಸಂವಿಧಾನದಲ್ಲಿ ಅಂಕಿತಗೊಂಡ ಮಾನವೀಯ ಹಕ್ಕುಗಳು ಎಂದು ಕಿಡಿಕಾರಿದರು.
ಸುಧಾರಣೆ ಎಂಬ ಹೆಸರಿನಲ್ಲಿ ತರಲಾದ ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಬದುಕನ್ನು ಸುಧಾರಿಸುವ ಬದಲು, ಅವರ ನೆಲೆಯನ್ನು ಕಿತ್ತುಕೊಳ್ಳುವ ಪ್ರಯತ್ನಗಳಾಗಿ ಕಾಣಿಸುತ್ತಿದೆ. ಸರ್ಕಾರವು ದೊಡ್ಡ ಧ್ವನಿಯಲ್ಲಿ ವಿಶ್ವವ್ಯಾಪಿ ಕನಿಷ್ಟ ವೇತನ, ಎಲ್ಲರಿಗೂ ಸಾಮಾಜಿಕ ಭದ್ರತೆ, ಗಿಗ್ ಮತ್ತು ಪ್ಲಾಟ್ ಫಾರ್ಮ್ ಕಾರ್ಮಿಕರಿಗೆ ರಕ್ಷಣೆ ಎಂದು ಘೋಷಣೆ ಮಾಡುತ್ತಿದೆ. ಆದರೆ ಆ ಘೋಷಣೆಗಳ ಹಿಂದೆ ನಿಂತಿರುವ ವಾಸ್ತವವು ಕಠಿಣವಾಗಿದೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ 2025 ನ.21ರಂದು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಅನುಷ್ಠಾನಕ್ಕೆ ತರುವ ಅಂತಿಮ ಪ್ರಕಟಣೆಯನ್ನು ಕೇಂದ್ರ ಸರ್ಕಾರ ಮಾಡಿತು. ಈ ನಾಲ್ಕು ಸಂಹಿತೆಗಳಿಗೆ ನಿಯಮಾವಳಿಗಳನ್ನು ರೂಪಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಕೇಂದ್ರ ಸರ್ಕಾರ ಪ್ರಕಟಿಸಿದ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆಗಳು ಹಾಗೂ ಸಿಐಟಿಯು ಸಂಘಟನೆ ಸಲ್ಲಿಸಿದ ಯಾವುದೇ ಆಕ್ಷೇಪಣೆ ಪರಿಗಣಿಸದೆ ಅಂತಿಮವಾಗಿ 2026 ಮೇ 8ರಂದು ಅಂತಿಮ ನಿಯಮಾವಳಿ ಪ್ರಕಟಿಸಿ ಅನುಷ್ಠಾನಕ್ಕೆ ತಂದಿರುವುದು ಅಪಾಯಕಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದೇಶಿ ಹಾಗೂ ಸ್ವದೇಶಿ ಕಾರ್ಪೊರೇಟ್ ಬಂಡವಾಳಿಗರ ಅನುಕೂಲಕ್ಕಾಗಿ ಈ ಸಂಹಿತೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರವು ಹಠಮಾರಿ ದೋರಣೆಯೊಂದಿಗೆ, ಕೇಂದ್ರ ಕಾರ್ಮಿಕ ಸಂಘಗಳ ಯಾವುದೇ ಮನವಿಗಳು, ಪ್ರತಿಭಟನೆಗಳು ಮತ್ತು ಮುಷ್ಕರಗಳನ್ನು ಲೆಕ್ಕಿಸದೆ, ಬಂಡವಾಳ ಶಾಹಿಗಳ ಬೇಡಿಕೆಗಳನ್ನು ಪೂರೈಸಲು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿರುವುದು ಅಪಾಯ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿಗಳಾದ ಚಂದ್ರಶೇಖರ್, ಎ.ಬಿ.ಶಶಿಕಲಾ, ಖಜಾಂಚಿ ಮಹದೇವಮ್ಮ, ಮುಖಂಡರಾದ ರಾಜಮ್ಮ, ಪ್ರೇಮಮ್ಮ, ತಿಮ್ಮೇಗೌಡ, ವಿ.ಶಿವಕುಮಾರ್, ಲಿಂಗರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net