ಕೆ.ಎಂ.ದೊಡ್ಡಿಯ ಚಾಂಶುಗರ್ಸ್ ಕಾರ್ಖಾನೆ ಆವರಣದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷವಾಗಿ ಅಲಂಕಾರ ಕೈಗೊಳ್ಳಲಾಗಿತ್ತು.
ನಾಡ ದೇವತೆ ಶ್ರೀ ಚಾಮುಂಡೇಶ್ವರಿ ವರ್ಧಂತ್ಯುತ್ಸವದ ಅಂಗವಾಗಿ ಇಲ್ಲಿನ ಚಾಂಶುಗರ್ಸ್ ಕಾರ್ಖಾನೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿ ಮೂರ್ತಿಗೆ ವಿಶೇಷ ಅಲಂಕಾರ ಕೈಗೊಂಡು ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.
ಮುಂಜಾನೆ 5.30ರಿಂದ ರಾತ್ರಿ 8.30ರವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆಗಳು ಹಾಗೂ ಉತ್ಸವಗಳು ವೈಭವದಿಂದ ಜರುಗಿದರೆ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸಿ ತಾಯಿ ದರ್ಶನ ಪಡೆದರು.
ದೇವಾಲಯದ ಪ್ರಧಾನ ಅರ್ಚಕ ಕಾರ್ತಿಕ ಆರಾಧ್ಯ ಅವರ ನೇತೃತ್ವದಲ್ಲಿ ಅಷ್ಟವಿಧ ಅಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ವಿಶೇಷ ಪೂಜೆ, ಸಹಸ್ರನಾಮಾರ್ಚನೆ ಸೇರಿ ನಾನಾ ಧಾರ್ಮಿಕ ವಿಧಿವಿಧಾನಗಳು ಸಂಗವಾಗಿ ನೆರವೇರಿದವು.
ಶ್ರೀ ಚಾಮುಂಡೇಶ್ವರಿ ತಾಯಿಗೆ ಅರಿಶಿಣ ಸೇರಿದಂತೆ ವಿವಿಧ ಬಗೆಯ ಹೂಗಳು ಹಾಗೂ ಆಭರಣಗಳಿಂದ ಅಲಂಕರಿಸಿ ಮಹಾಮಂಗಳಾರತಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಣ್ಣೂರಿನ ಉಪನ್ಯಾಸಕಿ ಜ್ಯೋತಿ ಸಂದೀಪ್ ಅವರು ಭಕ್ತರಿಗೆ ಪ್ರಸಾದ ವಿನಿಯೋಗದ ನೇತೃತ್ವ ವಹಿಸಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಸಂಜೆ ಗೋಧೂಳಿ ಲಗ್ನದಲ್ಲಿ ಉತ್ಸವ ಮೂರ್ತಿಯ ಭವ್ಯ ಪಲ್ಲಕ್ಕಿ ಉತ್ಸವ, ಉಯ್ಯಲೋತ್ಸವ ಹಾಗೂ ವಿಶೇಷ ಮೆರವಣಿಗೆ ಜರುಗಿದವು. ಕಾರ್ಖಾನೆ ಆವರಣದ ಸುತ್ತ ಉತ್ಸವ ಮೂರ್ತಿಯನ್ನು ಮೆರವಣಿಗೆ ನಡೆಸಲಾಯಿತು. ರಾತ್ರಿ ಶಯನೋತ್ಸವ ಹಾಗೂ ಶಾಂತಿ ಸಾಧನೆಯೊಂದಿಗೆ ದಿನದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಈ ಸಂದರ್ಭದಲ್ಲಿ ಚಾಂಶುಗರ್ಸ್ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಆರ್. ಮಣಿ, ಹಿರಿಯ ಪ್ರಧಾನ ವ್ಯವಸ್ಥಾಪಕ ಸೆಂಥಿಲ್, ಪ್ರಧಾನ ವ್ಯವಸ್ಥಾಪಕ ರವಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ಮಣಿಮಾರನ್, ಷಣ್ಮುಗಮ್, ಅಧಿಕಾರಿಗಳಾದ ನಿತೇಶ್, ನಿಂಗಯ್ಯ ಇತರರು ಇದ್ದರು.