ಮೇಲುಕೋಟೆಯಲ್ಲಿ ಏಕರೂಪ ಸಮಾನ ಶಿಕ್ಷಣಕ್ಕಾಗಿ ಒತ್ತಾಯಿಸಿ ಹಮ್ಮಿಕೊಂಡಿರುವ ಪಾದಯಾತ್ರೆ ಸಂಚರಿಸಿ ಜಾಗೃತಿ ಮೂಡಿಸಿತು. ಇಂಡವಾಳು ಚಂದ್ರಶೇಖರ್, ಶಿವಳ್ಳಿ ಚಂದ್ರಶೇಖರ್, ಸಂತೋಷ್ ಮಂಡ್ಯಗೌಡ, ಬೆಟ್ಟಸ್ವಾಮಿಗೌಡ, ಅಮೃತಿ ಶಂಕರ್ ಇದ್ದರು.
ಮೇಲುಕೋಟೆ: ಮಂಡ್ಯ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಏಕರೂಪ ಸಮಾನ ಶಿಕ್ಷಣಕ್ಕಾಗಿ ಒತ್ತಾಯಿಸಿ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ‘ಸರ್ಕಾರಿ ಶಾಲೆ ನನ್ನವ್ವ’ ಪಾದಯಾತ್ರೆ ಮೇಲುಕೋಟೆಯಲ್ಲಿ ಸಂಚರಿಸಿತು.
ಸಂತೋಷ್ ಮಂಡ್ಯಗೌಡ ಮುಂದಾಳತ್ವದ ತಂಡ ನಾಗಮಂಗಲ ತಾಲೂಕಿನಿಂದ ಮಧ್ಯಾಹ್ನ ಪಾಂಡವಪುರ ತಾಲೂಕಿನ ಬಳಿಘಟ್ಟ ಮೂಲಕ ಮೇಲುಕೋಟೆ ಪ್ರವೇಶಿಸಿತು. ಮೇಲುಕೋಟೆಯ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದ ತಂಡ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ, ಸರ್ಕಾರಿ ಶಾಲೆ ಬಲವರ್ಧನೆ ಮಾಡಿ ಎಂಬ ಜಾಗೃತಿ ಘೋಷಣೆಗಳನ್ನು ಕೂಗಿದರು. ಮೇಲುಕೋಟೆ ನಂತರ ಜಕ್ಕನಹಳ್ಳಿ ತೆರಳಿ ವಾಸ್ತವ್ಯ ಹೂಡಿತು. ಪಾದಯಾತ್ರೆ ಜೂನ್ 6ರಂದು ಮುಕ್ತಾಯವಾಗಲಿದ್ದು, ಅಂತಿಮ ದಿನ ಪಂಜಿನ ಮೆರವಣಿಗೆ ನಡೆಯಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡವಾಳು ಚಂದ್ರಶೇಖರ್, ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ತರುವ ಮೂಲಕ ಸಂವಿಧಾನದ ಮೂಲತತ್ವವನ್ನು ಜಾರಿಗೆ ತರಬೇಕು. ರಾಜ್ಯದ ಎಲ್ಲ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ ಜಾರಿಯಾಗಬೇಕು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಿಬಿಎಸ್‌ಇ ಮಾದರಿ ಗುಣಮಟ್ಟದ ಶಿಕ್ಷಣ ನೀಡುವ ಶಾಲೆ ಆರಂಭಿಸಿ ವಸತಿಸೌಕರ್ಯ ಕಲ್ಪಿಸಬೇಕು. ಶಾಲಾಭಿವೃದ್ಧಿ ಸಮಿತಿಗೆ ಅನುದಾನವನ್ನು ನೇರವಾಗಿ ನೀಡಬೇಕು ಎಂದು ಹೇಳಿದರು.
ರೈತ ಸಂಘದ ಯುವ ಘಟಕದ ಅಧ್ಯಕ್ಷ ಸಂತೋಷ್ ಮಂಡ್ಯಗೌಡ ಮಾತನಾಡಿ, ಬಳಿಘಟ್ಟ ಸೇರಿದಂತೆ ಜಿಲ್ಲೆಯ ಹಲವೆಡೆ ಸರ್ಕಾರಿ ಶಾಲೆಗಳು ಮುಚ್ಚಿವೆ. ಈಗಿರುವ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಿ ಮಕ್ಕಳ ದಾಖಲಾತಿ ಹೆಚ್ಚಿಸಲು ಜನಪ್ರತಿನಿಧಿಗಳು ಶ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಮೇಲುಕೋಟೆ ಯದುಶೈಲಾ ಪ್ರೌಢಶಾಲೆಯನ್ನು ಕಳೆದ ವರ್ಷದಿಂದ ಬಂದ್ ಮಾಡಿರುವುದು ದೌರ್ಭಾಗ್ಯದ ಸಂಗತಿ. ಇಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸುವ ಜತೆಗೆ ಇರುವ ಸರ್ಕಾರಿ ಶಾಲೆಗಳನ್ನಾದರೂ ಉಳಿಸಿಕೊಳ್ಳುವ ಕಾರ್ಯಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ಶಿವಳ್ಳಿ ಚಂದ್ರಶೇಖರ್, ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿಗೌಡ, ಎಸ್‌ಡಿಎಂಸಿ ಅಧ್ಯಕ್ಷ ಅಮೃತಿ ಶಂಕರ್, ತಗ್ಗಳ್ಳಿ ರವಿಚಂದ್ರ, ಹುಬ್ಬಳ್ಳಿ ಧನುಷ್‌ಗೌಡ, ತೇಜಸ್, ಕೃಷ್ಣೇಗೌಡ, ಮೇಲುಕೋಟೆ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್ ಭಾಗವಹಿಸಿದ್ದರು.