ಶೀಘ್ರದಲ್ಲೇ ಕ್ಯಾನ್ಸರ್ ಕೇಂದ್ರ ಪ್ರಾರಂಭ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ Cancer center to open soon
ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಮಿಮ್ಸ್ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ಮುಡಾ ಆಯುಕ್ತ ಕೃಷ್ಣ ಕುಮಾರ್, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಅಧೀಕ್ಷಕ ಡಾ.ಶಿವಕುಮಾರ್, ಡಾ.ಮೀರಾ ಶಿವಲಿಂಗಯ್ಯ ಇದ್ದರು.
ಮಂಡ್ಯ: ಮಿಮ್ಸ್‌ನಲ್ಲಿ ನೂತನ ಕ್ಯಾನ್ಸರ್ ಕೇಂದ್ರ ಸ್ಥಾಪಿಸಲಾಗುತ್ತಿದೆ. ಸಧ್ಯಕ್ಕೆ ಕಾಮಗಾರಿ ಪ್ರಗತಿಯಲ್ಲಿದೆ, ಬಂಕರ್ ಅಳವಡಿಕೆ ಮಾಡಲು ಮೂರರಿಂದ ನಾಲ್ಕು ತಿಂಗಳ ಕಾಲಾವಕಾಶದ ಅಗತ್ಯವಿದೆ. ಶೀಘ್ರವಾಗಿ ಕ್ಯಾನ್ಸರ್ ಕೇಂದ್ರ ಸ್ಥಾಪಿಸಿ ಸಾರ್ವಜನಿಕರಿಗೆ ಸೇವೆ ಒದಗಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಮಿಮ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿನಿತ್ಯ ಮಿಮ್ಸ್‌ನಲ್ಲಿ 500 ಯೂಟ್ ರಕ್ತದ ದಾಸ್ತಾನು ಇರುತ್ತದೆ. ಸಧ್ಯಕ್ಕೆ ಯಾವುದೇ ಕೊರತೆ ಇಲ್ಲ, ರಕ್ತ ಸಂಗ್ರಹಣೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ವಿವಿಧ ರಕ್ತದಾನ ಶಿಬಿರ ಆಯೋಜಿಸಿ ಉತ್ತಮ ಕಾರ್ಯ ಮಾಡುತ್ತಿದೆ. ಆದಾಗ್ಯೂ ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹಣೆ ಮಾಡಿ. ಪದವಿ ಕಾಲೇಜುಗಳಲ್ಲೂ ರಕ್ತದಾನದ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿ ರಕ್ತದಾನ ಶಿಬಿರ ಆಯೋಜಿಸಿ ಎಂದು ಸೂಚಿಸಿದರು.
ನೈರ್ಮಲ್ಯ ಕಾಪಾಡಿ: ಕಳೆದ ಹದಿನೈದು ದಿನದ ಹಿಂದೆ ಖುದ್ದು ನಾನೇ ಆರೋಗ್ಯ ಧಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಆರೋಗ್ಯ ಧಾಮದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ. ಮಿಮ್ಸ್‌ನ ವಿವಿಧ ವಿಭಾಗಗಳ ಫುಟ್‌ಪಾತ್‌ನಲ್ಲಿ ಯಾರನ್ನು ತಂಗಲು ಬಿಡಬೇಡಿ. ಬಡವರಿಗೆ ಅನುಕೂಲವಾಗಲೆಂದು ಆರೋಗ್ಯ ಧಾಮ ನಿರ್ಮಿಸಲಾಗಿದೆ. ಆರೋಗ್ಯ ಧಾಮದಲ್ಲಿ ತಂಗಲು ಸೂಚಿಸಿ. ಇಲ್ಲಿಯವರೆಗೂ ಆರೋಗ್ಯ ಧಾಮ 1.69 ಲಕ್ಷ ರೂ ಆದಾಯ ಗಳಿಸಿದೆ. ಆ ಮೊತ್ತದಲ್ಲಿ ಆರೋಗ್ಯ ಧಾಮದ ನಿರ್ವಹಣೆ ಮಾಡಲಾಗುತ್ತಿದೆ. ಆರೋಗ್ಯ ಧಾಮದಲ್ಲಿ ಕಡ್ಡಾಯವಾಗಿ ಕಸದ ಬುಟ್ಟಿ ಇಡಬೇಕು. ಎಲ್ಲರೂ ಕಸದ ಬುಟ್ಟಿಗೆ ಕಸವನ್ನು ಹಾಕಬೇಕು. ಆರೋಗ್ಯ ಧಾಮದಲ್ಲಿ ತಂಗುವವರಿಗೆ ಕೈ ತೊಳೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಿ. ಆರೋಗ್ಯ ಧಾಮವನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ತಿಳಿಸಿ ಎಂದು ಹೇಳಿದರು.
ಉಪಲೋಕಾಯುಕ್ತರು ಆಗಮಿಸಿದಾಗ ಸೂಚಿಸಿದಂತೆ ಎಲ್ಲ ಒಪಿಡಿಗಳಲ್ಲೂ ಮಹಿಳೆಯರು, ಪುರುಷರು, ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲು ಮಾಡಲಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತ್ಯೇಕ ಸಾಲುಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸಿ. ಮಿಮ್ಸ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಹಾಗೂ ಆರೈಕೆದಾರರಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಿ ಹಾಗೂ ಕಾಲ ಕಾಲಕ್ಕೆ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿ. ಕ್ಯಾಂಟೀನ್ ನಿರ್ವಹಣೆ ಮಾಡಲು ಟೆಂಡರ್ ಪ್ರಕ್ರಿಯೆ ಆರಂಭಿಸಿ, ಆಸ್ಪತ್ರೆಯ ಶೌಚಗೃಹದಲ್ಲಿ ಶುಚಿತ್ವ ಕಾಪಾಡಿ ಉತ್ತಮವಾಗಿ ನಿರ್ವಹಣೆ ಮಾಡಿ ಎಂದರು.
ಎಂಆರ್‌ಐ ಸ್ಕ್ಯಾನಿಂಗ್ ಮಾಡಲು ಹೆಚ್ಚಿನ ದಿನ ತೆಗೆದುಕೊಳ್ಳಬೇಡಿ. ಮೂರರಿಂದ ನಾಲ್ಕು ದಿನದೊಳಗಾಗಿ ಸ್ಕ್ಯಾನಿಂಗ್ ಮಾಡಿ. ತುರ್ತು ಅಗತ್ಯವಿರುವ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಸ್ಕ್ಯಾನಿಂಗ್ ಮಾಡಿ. ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡಬೇಕು. ವೈದ್ಯರ ಹಾಜರಾತಿ ತೆಗೆದುಕೊಂಡು ಮೇಲ್ವಿಚಾರಣೆ ಮಾಡಿ. ಪಾರ್ಕಿಂಗ್ ನಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿರುವುದು ಗಮನಕ್ಕೆ ಬಂದು ಗುತ್ತಿಗೆದಾರನ ಮೇಲೆ ಈಗಾಗಲೇ ಕ್ರಮ ಜರುಗಿಸಲಾಗಿದೆ. ಪಾರ್ಕಿಂಗ್ ಶುಲ್ಕದ ಕುರಿತು ಗುತ್ತಿಗೆದಾರನ್ನು ಕರೆದು ಸಾರ್ವಜನಿಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಿದಂತೆ ಎಚ್ಚರಿಕೆ ನೀಡಿ. ನಿಗದಿತ ಮೊತ್ತವನ್ನು ಮಾತ್ರ ಸಾರ್ವಜನಿಕರಿಂದ ಪಡೆಯುವಂತೆ ಸೂಚಿಸಿ ಎಂದು ತಾಕೀತು ಮಾಡಿದರು.
ನಂದಾ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಅಗತ್ಯ ಪ್ರಮಾಣದಲ್ಲಿ ಗ್ರಾಹಕರ ಆಹಾರ ಸೇವಿಸಲು ಆಗಮಿಸುತ್ತಿಲ್ಲ. ಸದರಿ ಇಂದಿರಾ ಕ್ಯಾಂಟೀನ್ ಅನ್ನು ಮಿಮ್ಸ್ ಆಸ್ಪತ್ರೆ ಒಳಭಾಗದಲ್ಲಿ ವರ್ಗಾಯಿಸಿದರೆ ಚಿಕಿತ್ಸೆ ಆಗಮಿಸಿದ ಸಾರ್ವಜನಿಕರಿಗೆ ಉಪಯುಕ್ತವಾಗುತ್ತದೆ. ಅವಕಾಶವಿದ್ದಲ್ಲಿ ವರ್ಗಾಯಿಸೋಣ. ಅಧಿಕಾರಿಗಳನ್ನು ಸದರಿ ಕಾರ್ಯವನ್ನು ಪರಿಶೀಲಿಸಿ ಎಂದು ಹೇಳಿದರು.
ಸಭೆಯಲ್ಲಿ ಮುಡಾ ಆಯುಕ್ತ ಕೃಷ್ಣ ಕುಮಾರ್, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಅಧೀಕ್ಷಕ ಡಾ.ಶಿವಕುಮಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ರಕ್ತ ನಿಧಿ ಕೇಂದ್ರ ಮುಖ್ಯಸ್ಥ ಡಾ.ಮುರಳೀಧರ ಭಟ್ ಇತರರಿದ್ದರು.