ನಾಲೆಗಳ ಆಧುನೀಕರಣ ಕಾಮಗಾರಿಗೆ ಚಾಲನೆ

ಮದ್ದೂರು ತಾಲೂಕಿನ ವೈದ್ಯನಾಥಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಅಂದಾಜು 50 ಕೋಟಿ ರೂ ವೆಚ್ಚದಲ್ಲಿ ಮದ್ದೂರು ಕೆರೆಯಡಿ ಬರುವ ವೈದ್ಯನಾಥಪುರ, ಬೈರನ್ ಹಾಗೂ ಚಾಮನಹಳ್ಳಿ ನಾಲೆಗಳ ಆಧುನೀಕರಣ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಮೋಹನ್‌ಕುಮಾರ್, ಅಜ್ಜಹಳ್ಳಿ ರಾಮಕೃಷ್ಣ, ಸಂದೀಪ್, ಹರೀಶ್‌ಬಾಬು, ಟಿ.ಆರ್.ಪ್ರಸನ್ನಕುಮಾರ್ ಮಮತಾ, ಸರ್ವಮಂಗಳಾ ಇದ್ದರು.
ಮದ್ದೂರು ತಾಲೂಕಿನ ವೈದ್ಯನಾಥಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಅಂದಾಜು 50 ಕೋಟಿ ರೂ ವೆಚ್ಚದಲ್ಲಿ ಮದ್ದೂರು ಕೆರೆಯಡಿ ಬರುವ ವೈದ್ಯನಾಥಪುರ, ಬೈರನ್ ಹಾಗೂ ಚಾಮನಹಳ್ಳಿ ನಾಲೆಗಳ ಆಧುನೀಕರಣ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಮೋಹನ್‌ಕುಮಾರ್, ಅಜ್ಜಹಳ್ಳಿ ರಾಮಕೃಷ್ಣ, ಸಂದೀಪ್, ಹರೀಶ್‌ಬಾಬು, ಟಿ.ಆರ್.ಪ್ರಸನ್ನಕುಮಾರ್ ಮಮತಾ, ಸರ್ವಮಂಗಳಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ
  • ಶಾಸಕ ಕೆ.ಎಂ.ಉದಯ್ ಭರವಸೆ
ಮದ್ದೂರು: ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಸರ್ಕಾರ 800 ಕೋಟಿ ರೂ.ಗೂ ಹೆಚ್ಚಿನ ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ವಿಶ್ವಾಸವ್ಯಕ್ತಪಡಿಸಿದರು.
ತಾಲೂಕಿನ ವೈದ್ಯನಾಥಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ಮದ್ದೂರು ಕೆರೆಯಡಿ ಬರುವ ವೈದ್ಯನಾಥಪುರ, ಬೈರನ್ ಹಾಗೂ ಚಾಮನಹಳ್ಳಿ ನಾಲೆಗಳ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಮುಂದಿನ ವರ್ಷದೊಳಗೆ ವೈದ್ಯನಾಥ, ಬೈರನ್ ಹಾಗೂ ಚಾಮನಹಳ್ಳಿ ನಾಲೆಗಳ ಆಧುನೀಕರಣ ಮುಗಿಯಲಿದೆ. ಕೆಮ್ಮಣ್ಣುನಾಲೆ ಆಧುನೀಕರಣ, ಸೂಳೆಕೆರೆ ಹಾಗೂ ಮದ್ದೂರಮ್ಮನಕೆರೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರವಾಗಿ ಕಾಮಗಾರಿಗಳು ಮುಗಿದರೆ ಕೊನೇ ಭಾಗದ ಜಮೀನುಗಳಿಗೆ ನೀರು ಸರಾಗವಾಗಿ ಹರಿಯಲಿದೆ ಎಂದರು.
ವ್ಯವಸಾಯದ ಉದ್ದೇಶಕ್ಕಾಗಿ ಆಗಾಗ್ಗೆ ಕಾವೇರಿ ನೀರಾವರಿ ಕಚೇರಿ ಮುಂದೆ ರೈತರು ನಡೆಸುತ್ತಿದ್ದ ಪ್ರತಿಭಟನೆಗಳು ಇನ್ನು ಮುಂದೆ ನಡೆಯುವುದಿಲ್ಲ. ಏಕೆಂದರೆ ಮುಂದಿನ ದಿನಗಳಲ್ಲಿ ಬೇಸಾಯ ಮಾಡಲು ನೀರಿಗೆ ಯಾವುದೇ ರೀತಿಯಲ್ಲಿ ರೈತರಿಗೆ ತೊಂದರೆಯಾಗುವುದಿಲ್ಲ. ಆ ನಿಟ್ಟಿನಲ್ಲಿ ನಾಲೆಗಳ ಆಧುನೀಕರಣ ಮಾಡಲಾಗುತ್ತಿದೆ ಎಂದರು.

ಮದ್ದೂರು ಕೆರೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕೆಮ್ಮಣ್ಣು ನಾಲಾ, ವೈದ್ಯನಾಥ, ಬೈರನ್ ಹಾಗೂ ಚಾಮನಹಳ್ಳಿ ನಾಲೆಗಳ ಆಧುನೀಕರಣ ಕಾಮಗಾರಿಗೆ ಈಗಾಗಲೇ ಸರ್ಕಾರದಿಂದ 50 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕೆಮ್ಮಣ್ಣು ನಾಲೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೆರಡು ತಿಂಗಳಲ್ಲಿ ಪೂರ್ಣಗೊಂಡು ಮುಂಗಾರು ಬೆಳೆ ವೇಳೆಗೆ ರೈತರ ಬೇಸಾಯಕ್ಕೆ ನೀರನ್ನು ಒದಗಿಸಲಾಗುವುದು ಎಂದರು.
ನಾಲೆಗಳ ಆಧುನಿಕರಣ ಕಾಮಗಾರಿ ನಾಳೆಯಿಂದಲೇ ಪ್ರಾರಂಭವಾಗಲಿದ್ದು, ಈ ಎರಡು ನಾಲೆಗಳು 6 ಕಿ.ಮೀ. ವ್ಯಾಪ್ತಿಯ 800 ಎಕರೆಗೂ ಹೆಚ್ಚು ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಿದೆ. ನಗರದ ವ್ಯಾಪ್ತಿಯಲ್ಲಿ 2 ಕಿ.ಮೀ. ಕಾಂಕ್ರೀಟ್ ರಸ್ತೆ, ಕವರ್ ಡೆಕ್ ಮಾಡಲಾಗುವುದು. ಮುಂದಿನ 15 ತಿಂಗಳಲ್ಲಿ ಈ ಮೂರು ನಾಲೆಗಳು ಅಭಿವೃದ್ಧಿ ಹೊಂದಿ ಮುಂದಿನ 50 ವರ್ಷಗಳ ಕಾಲ ರೈತರ ಬೇಸಾಯಕ್ಕೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ವ್ಯವಸಾಯಕ್ಕೆ ನಿರಂತರವಾಗಿ ನೀರು ಹರಿಸಬೇಕು ಎಂಬ ಉದ್ದೇಶದಿಂದ ಸೂಳೆಕೆರೆ 300 ಎಕರೆ ಹಾಗೂ ಮದ್ದೂರಮ್ಮನಕೆರೆ 150 ಎಕರೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಿ ಕೆರೆಯಲ್ಲಿದ್ದ ಹೂಳು ತೆಗೆಸುವುದು ಸೇರಿದಂತೆ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.
ನಾಲೆಗಳ ಸಂಪೂರ್ಣ ಆಧುನೀಕರಣವಾದ ನಂತರ ಕೆಲವೇ ಗಂಟೆಗಳಲ್ಲಿ ನೀರು ರೈತರ ಜಮೀನುಗಳಿಗೆ ಸರಾಗವಾಗಿ ಹರಿದು ಬೇಸಾಯಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಶ್ರೀ ಪಸನ್ನ ಪಾರ್ವತಾಂಬ ವೈದ್ಯನಾಥೇಶ್ವರ ಟ್ರಸ್ಟ್ ಅಧ್ಯಕ್ಷ ವಿ.ಟಿ.ಶಿವರಾಜ್ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರಿಗೆ ಕ್ಷೇತ್ರದ ಅಭಿವೃದ್ಧಿಗೆ ಬಗ್ಗೆ ಅಪಾರವಾದ ಕಾಳಜಿಯಿದ್ದು, ರೈತರು ಹಾಗೂ ಸಾರ್ವಜನಿಕರ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವುದು ಪ್ರಶಂಶನೀಯ ಸಂಗತಿ ಎಂದರು.
ವೈದ್ಯನಾಥಪುರ ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ದೇಗುಲದ ಮುಂದೆ ಶಿಂಷಾ ನದಿಗೆ ಹೋಗಲು ಸೋಪಾನ ಕಟ್ಟೆ ಹಾಗೂ ಮೆಟ್ಟಿಲುಗಳು ಸರಿಯಿಲ್ಲದ ಕಾರಣ ಭಕ್ತಾದಿಗಳಿಗೆ ತೊಂದರೆಯಾಗಿತ್ತು. ಈ ಬಗ್ಗೆ ಶಾಸಕರ ಗಮನಕ್ಕೆ ತಂದಾದ ಸರ್ಕಾರದಿಂದ ಸುಮಾರು 3 ಕೋಟಿ ರೂ. ಅನುದಾನ ತಂದು ಸೋಪಾನಕಟ್ಟೆ ಮತ್ತು ಮೆಟ್ಟಿಲುಗಳನ್ನು ನಿರ್ಮಾಣ ಮಾಡಿಸಿ ಭಕ್ತರಿಗೆ ಅನುಕೂಲ ಕಲ್ಪಿಸಿದರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಮಮತಾ ಶಂಕರೇಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಸನ್ನಕುಮಾರ್, ಮಾಜಿ ಸದಸ್ಯೆ ಸರ್ವಮಂಗಳ, ಶ್ರೀ ಪಸನ್ನ ಪಾರ್ವತಾಬ ವೈದ್ಯನಾಥೇಶ್ವರ ಟ್ರಸ್ಟ್ ಅಧ್ಯಕ್ಷ ವಿ.ಟಿ.ಶಿವರಾಜ್, ಮುಖಂಡರಾದ ನಾರಾಯಣ್, ಗೋವಿಂದ್, ಮುರಳಿ, ಶಿವರಾಜ್, ಕೆ.ಎಂ.ರವಿ, ಶಿವಚರಣ್, ಗಿರೀಶ್, ಪುನೀತ್, ಕಾವೇರಿ ನೀರಾವರಿ ನಿಗಮದ ಇಇ ನಂಜುಂಡೇಗೌಡ, ಎಇಇ ನಾಗರಾಜ್ ಗುತ್ತಿಗೆದಾರ ಶ್ರೀನಿವಾಸ್, ಸದಾನಂದ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net