ಚೋಳರ ಕಾಲದ ಐತಿಹಾಸಿಕ ವೈಭೋಗಕ್ಕೆ ಸಾಕ್ಷಿ ಬೈರಾಪುರ

ಬೈರಾಪುರ  ರಾಮಲಿಂಗೇಶ್ವರ ದೇವಸ್ಥಾನ
ಬೈರಾಪುರ ರಾಮಲಿಂಗೇಶ್ವರ ದೇವಸ್ಥಾನ
Published on
ಕೆ.ಆರ್. ಪೇಟೆ: ಚೋಳರ ಕಾಲದ ಐತಿಹಾಸಿಕ ವೈಭೋಗಕ್ಕೆ ಸಾಕ್ಷಿಯಾಗಿರುವ ಗ್ರಾಮವೊಂದು ತಾಲೂಕಿನಲ್ಲಿ ಇರುವುದು ಪರಂಪರೆ ಮತ್ತು ಹೆಮ್ಮೆಯ ಸಂಕೇತವಾಗಿದೆ.
ಅಂದಿನ ಶ್ರೀನಿವಾಸ ಪುರ ಎಂಬ ಗ್ರಾಮಕ್ಕೆ ಇಂದು ಬೈರಾಪುರ ಎಂಬ ಹೆಸರು ಬಂದಿದೆ. ಇಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ದೇವಸ್ಥಾನವಿದೆ. ಶ್ರೀನಿವಾಸಪುರದಲ್ಲಿ ಚೋಳರು ರಾಮಲಿಂಗೇಶ್ವರ ( ಬೈರಾಮೇಶ್ವರ) ದೇವಸ್ಥಾನ ನಿರ್ಮಿಸಿದ್ದರಿಂದ ಇದು ಬೈರಾಮಪಟ್ಟಣ ಎಂದೇ ಹೆಸರು ಪಡೆಯಿತು. ಶತಮಾನ ಕಳೆದಂತೆ ಬೈರಾಪುರ ಆಯಿತು.
ಕ್ರಿ.ಶ. 1346ರ ಕ್ರೋಧಿನಾಮ ಸಂವತ್ಸರದಲ್ಲಿ ಹೊಯ್ಸಳ ಆಳ್ವಿಕೆ ಸಂದರ್ಭದಲ್ಲಿ ಚಿಕ್ಕ ಒಡೆಯರ್ ಎಂಬ ರಾಜ ಬೈರಾಮೇಶ್ವರ ದೇವಸ್ಥಾನಕ್ಕೆ ದತ್ತಿ ನೀಡಿದ್ದ ಎಂಬುದಕ್ಕೆ ದಾಖಲೆಗಳಿವೆ. (1312ರಲ್ಲಿ ರಾಜ ಅನಂತಪ್ಪ ಒಡೆಯರ್ ಎಂಬವರೂ ದೇೀವಸ್ಥಾನದ ಅಭಿವೃದ್ಧಿಗೆ ದತ್ತಿ ನೀಡಿದ್ದಾರೆ. ) ಈ ದೇವರನ್ನು ಸೋಮನಾಥೇಶ್ವರ ಎಂದೂ ಕರೆಯುತ್ತಿದ್ದರು. ಈ ದೇವಸ್ಥಾನಕ್ಕೆ ಶ್ರೀ ಆದಿ ಶಂಕರಾಚಾರ್ಯರೂ ಬಂದು ಹೋಗಿದ್ದರು ಎಂಬ ಪ್ರತೀತಿ ಇದೆ. ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. ಕೆ.ಆರ್. ನಗರದ ಶಂಕರಾಚಾರ್ಯ ಪೀಠವಾದ ಯಡತೊರೆ ಮಠದ ಯತಿಗಳು ದೈವಿಕ ಸನ್ನಿಧಿಯ ಬಗ್ಗೆ ಸಂಶೋಧನೆಗೆ ಮುಂದಾಗಿರುವುದು ಗಮನ ಸೆಳೆದಿದೆ.
*
ವಿಭಜನೆಯಾಯಿತು: ಬೈರಾಪುರಗ್ರಾಮ ಹಿಂದೆ ದೊಡ್ಡದಾಗಿತ್ತು. ಗ್ರಾಮ ವಿಭಜನೆ ಆಗಿ ನಂತರ 3 ಗ್ರಾಮಗಳಾದವು. ಮೂಲ ಗ್ರಾಮದಲ್ಲೇ ಉಳಿದವರು ಬೈರಾಪುರ ನಿವಾಸಿಗಳಾದರು. ವಿಭಜಿತವಾದ ಗ್ರಾಮಗಳು ಕಾಗೆಪುರ, ಗವಿಗೌಡನ ಕೊಪ್ಪಲು ಎಂದಾಯಿತು. ಗ್ರಾಮ ಪಶ್ಚಿಮಕ್ಕೆ ಎತ್ತರವಾಗಿದೆ. ಪೂರ್ವ, ಉತ್ತರಕ್ಕೆ ತಗ್ಗು ಪ್ರದೇಶ ಹೊಂದಿದೆ. ಗ್ರಾಮದ ಆಗ್ನೇಯ ಮೂಲಕ್ಕೆ ದೊಡ್ಡ ಕೆರೆಯಿದೆ. ಕೆರೆ ಹಿಂಭಾಗಕ್ಕೆ ನಾಲೆ ಇದೆ. ನಾಲೆ ನೀರಿನಿಂದ ಕೆರೆ ತುಂಬಿಸುವ ವ್ಯವಸ್ಥೆ ಇರುವುದು ಗ್ರಾಮದ ಕೃಷಿಕರ ನೀರಾವರಿ ಸೌಲಭ್ಯಕ್ಕೆ ಮೂಲವಾಗಿದೆ.
ಗ್ರಾಮದ ವಾಯವ್ಯ ದಿಕ್ಕಿನಲ್ಲಿ ತಿಪ್ಪಯ್ಯ ಎಂಬುವರು ಕಟ್ಟಿಸಿದ ಕೊಳ ಇದೆ. ಅದು ತಿಪ್ಪಯ್ಯನ ಕೊಳ ಎಂದೇ ಹೆಸರಾಗಿದೆ. ಯಾವುದೇ ಬೇಸಿಗೆಯಲ್ಲೂ ಇಲ್ಲಿ ನೀರು ಖಾಲಿ ಆಗಿಲ್ಲ. ಜಾನುವಾರುಗಳು ಕೊಳದ ನೀರನ್ನು ಅವಲಂಬಿಸಿವೆ.
*
ಕೃಷಿ ಚಟುವಟಿಕೆಯೇ ಮೂಲ
ಗ್ರಾಮದ ಜನರು ಪ್ರಮುಖವಾಗಿ ಕೃಷಿಯಲ್ಲಿ ತೊಡಗಿದ್ದಾರೆ. ಭತ್ತ, ರಾಗಿ, ತೆಂಗು ಪ್ರಮುಖ ಬೆಳೆಗಳು. ಜತಗೆ ಹೈನುಗಾರಿಕೆಯಲ್ಲೂ ತೊಡಗಿದ್ದಾರೆ. ಅನೇಕ ಕೃಷಿಕರು ಹಾಲನ್ನು ಸಮೀಪದ ಕಾಗೆಪುರ, ಗವಿಗೌಡನಕೊಪ್ಪಲು ಡೇರಿಗೆ ಮಾಡುತ್ತಾರೆ. ಬಹುತೇಕ ಯುವ ಜನರು ಬೆಂಗಳೂರಿನಲ್ಲಿ ಕಾರ್ಖಾನೆ, ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾರೆ. ಹಲವರು ಸ್ವಂತ ವ್ಯವಹಾರ ಮಾಡಿಕೊಂಡು ಆರ್ಥಿಕ ಬೆಳವಣಿಗೆ ಕಂಡಿದ್ದಾರೆ. ಕೆಲವರು ಉದ್ಯಮಗಳನ್ನು ಪ್ರಾರಂಭಿಸಿ ಹತ್ತಾರು ಜನರಿಗೆ ಉದ್ಯೋಗ ನೀಡಿ ಉದ್ಯೋಗದಾತರಾಗಿದ್ದಾರೆ. ಗ್ರಾಮದಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಿನವರಿದ್ದಾರೆ. ಇವರೊಂದಿಗೆ ಬ್ರಾಹ್ಮಣರು, ವೈಷ್ಣವರು, ಗಾಣಿಗರು, ಸವಿತಾ ಸಮಾಜ, ವಡ್ಡರು, ದಾಸಗೌಡ ಸಮುದಾಯದವರು ಸೌಹಾರ್ದತೆಯಿಂದ ಬದುಕುತ್ತಿರುವುದು ವಿಶೇಷವಾಗಿದೆ.
*
ಪುಷ್ಪ ಕೃಷಿ:
ಈ ಗ್ರಾಮದಲ್ಲಿ ಮೂಲ ಕೃಷಿಯೊಂದಿಗೆ ಹಲವು ರೀತಿಯ ಹೂವುಗಳನ್ನೂ ಮೊದಲಿನಿಂದಲೂ ಬೆಳೆಯುವವರಿದ್ದಾರೆ. ಹೂವು ಬೆಳೆದು, ಕಟ್ಟಿ ಮಾರಾಟ ಮಾಡುವುದೂ ಒಂದು ವೃತ್ತಿಯಾಗಿದೆ. ಈ ಸಮುದಾಯವನ್ನು ಹೂವಾಡಿಗರು ಎಂದೇ ಕರೆಯುತ್ತಾರೆ.
ಗ್ರಾಮದಲ್ಲಿ ಹೇಮಾವತಿ ಎಡದಂಡೆ ನಾಲೆ ಹರಿದುಹೋಗಿದೆ. ಈ ನಾಲೆಯಿಂದ ಗ್ರಾಮದ ಹಲವರಿಗೆ ನೀರಾವರಿ ಸೌಲಭ್ಯ ಸಿಕಿದೆ. ಉಳಿದವರಿಗೆ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ಇವರು ನೀರಾವರಿ ಸೌಲಭ್ಯಕ್ಕಾಗಿ ಕೊಳವೆ ಬಾವಿಗಳನ್ನು ಕೊರೆಸಿ ಸ್ವತಃ ನೀರಾವರಿ ಸೌಲಭ್ಯ ಮಾಡಿಕೊಂಡಿದ್ದಾರೆ.
*
ಶಿವರಾತ್ರಿ ಆಚರಣೆ ವಿಜೃಂಭಣೆ
ಬೈರಾಪುರ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಆಚರಣೆ ವಿಜೃಂಭಣೆಯಿಂದ ನೆರವೇರುತ್ತದೆ. ಅಂದು ಶ್ರೀ ರಾಮಲಿಂಗೇಶ್ವರ ಯುವಕರ ಬಳಗದ ವತಿಯಿಂದ ಜಾಗರಣೆ, ಪೌರಾಣಿಕ ನಾಟಕ ಪ್ರದಶನ, ಹರಿಕಥೆ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಗೊಂಡಿರುತ್ತದೆ. ಶಿವರಾತ್ರಿ ಮರುದಿನ ಸುತ್ತಮುತ್ತಲಿನ ಗ್ರಾಮಗಳಿಗೆ ಅನ್ನಸಂತರ್ಪಣೆ ನೆರವೇರುತ್ತದೆ. ಶಿವರಾತ್ರಿ ಪೂರ್ಣ ಶಿವ ನಾಮ ಜಪ, ಪೂಜೆ, ಮಂತ್ರಗಳು ಇಲ್ಲಿ ಮೇಳೈಸುತ್ತವೆ. ದೇವರಿಗೆ ಹತ್ತಾರು ಅರ್ಚನೆಗಳು, ಅಭಿಷೇಕಗಳು ನೆರವೇರುತ್ತವೆ.
*
ಮಾರಿಹಬ್ಬ ಆಚರಣೆ
ಗ್ರಾಮ ದೇವತೆ ಮಾರಿಹಬ್ಬವನ್ನು ಗ್ರಾಮದ ಎಲ್ಲರೂ ಅದ್ದೂರಿಯಾಗಿ ಮಾಡುತ್ತಾರೆ. ಈ ಸಂದರ್ಭ ತಂಬಿಟ್ಟಿನ ಆರತಿ ಹೊತ್ತು ತಂದೆ ಮಹಿಳೆಯರು ಮಾರಮ್ಮನಿಗೆ ಪೂಜೆ ಸಲ್ಲಿಸಿ ದೇವಿಗೆ ಪೂಜೆ ಮಾಡುತ್ತಾರೆ. ವರ್ಷಕ್ಕೊಮ್ಮೆ ವೀರಭದ್ರೇಶ್ವರ ಉತ್ಸವ ನಡೆಯುತ್ತದೆ. ಈ ವೇಳೆ ಡೊಳ್ಳು ಕುಣಿತ, ಕೇರಳ ಚಂಡೆ ಸೇರಿ ಜಾನಪದ ಕಲಾತಂಡ ಉತ್ಸವದ ಮೆರುಗನ್ನು ಹೆಚ್ಚಿಸುತ್ತವೆ. ಉತ್ಸವ ಅದ್ದೂರಿಯಾಗಿ ನಡೆಯುತ್ತದೆ.
ಹಲವು ಆಲಯಗಳು
ಬೈರಾಪುರ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ, ಕಾಲ ಭೈರವೇಶ್ವರ, ವೀರಭದ್ರೇಶ್ವರ, ಗ್ರಾಮ ದೇವತೆ ಮಾರಮ್ಮ, ಚನ್ನಿಗರಾಯ, ಲಕ್ಷ್ಮೀದೇವಿ ದೇವಸ್ಥಾನಗಳಿವೆ. ಹಾಗಾಗಿ ಇದು ದೇವಾಲಯಗಳ ಕ್ಷೇತ್ರವಾಗಿದೆ. ತಾಲೂಕಿನಲ್ಲಿ ಈ ರೀತಿಯ ಹಲವು ಸನ್ನಿಧಿ ಇರುವ ಗ್ರಾಮ ಯಾವುದೂ ಇಲ್ಲ. ಹಾಗಾಗಿ ಈ ಗ್ರಾಮಕ್ಕೆ ವಿಶೇಷ ಗೌರವ ಇದೆ. ಇತ್ತೀಚೆಗೆ ರಾಮಲಿಂಗೇಶ್ವರ, ವೀರಭದ್ರೇಶ್ವರ, ಮಾರಮ್ಮ, ಲಕ್ಷ್ಮೀದೇವಿ, ಕಾಲಭೈರವ ದೇವಸ್ಥಾನ ಜೀರ್ಣೋದ್ಧಾರ ಆಗಿವೆ. ಚನ್ನಿಗರಾಯ ದೇವಸ್ಥಾನ ಜೀರ್ಣೋದ್ಧಾರ ಆಗಬೇಕಿದೆ. ಜೀರ್ಣೋದ್ಧಾರಕ್ಕೆ ಗ್ರಾಮದ ಮುಖಂಡರ ಚಿಂತನೆ ಇದೆ. ಶಾಸಕ ಎಚ್. ಟಿ. ಮಂಜು ಕೂಡ ಇದಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ.
*
ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಇಲ್ಲ
ಬೈರಾಪುರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ, ಸರ್ಕಾರಿ ಪ್ರಾಥಮಿಕ ಶಾಲೆಯಿದೆ. ಮಕ್ಕಳು ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ 2 ಕಿ.ಮೀ. ದೂರದ ಶೀಳನೆರೆ ಶಾಲೆಗೆ ಹೋಗಬೇಕು.
ಕಾಲೇಜು ವಿದ್ಯಾಭ್ಯಾಸಕ್ಕೆ ಶೀಳನೆರೆ ಅಥವಾ ಕೆ.ಆರ್. ಪೇಟೆಗೆ ಹೋಗಬೇಕು. ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲವಾಗಿದೆ. ಬಸ್ ಸೌಲಭ್ಯಕ್ಕಾಗಿ ಹರಳಹಳ್ಳಿ ಅಥವಾ ಶೀಳನೆರೆ ಗ್ರಾಮಕ್ಕೆ ತೆರಳಬೇಕಿದೆ. ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕೆಂಬ ಆಗ್ರಹ ಹಲವು ವರ್ಷಗಳಿಂದ ಇದೆ. ಗ್ರಾಮದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಮೂಲಸೌಲಭ್ಯವನ್ನು ಗ್ರಾಪಂ, ಜಿಪಂ, ಶಾಸಕರ ಅನುದಾನದಲ್ಲಿ ಲಭ್ಯವಾಗಿದೆ. ಈ ಸೌಕರ್ಯಗಳು ಸುಖಮಯ ಜೀವನಕ್ಕೆ ಸಹಕಾರಿಯಾಗಿದೆ.
*
ಗ್ರಾಮದಲ್ಲಿ ಚೊಳರ ಕಾಲದ ದೇವಸ್ಥಾನ ಇರುವುದು ಗ್ರಾಮದ ಹೆಮ್ಮೆಯಾಗಿದೆ. ಗ್ರಾಮ ವಿಭಜನೆ ಆಗಿ ಮೂರು ಗ್ರಾಮಗಳಾಗಿವೆ. ಎಲ್ಲರೂ ಸೌಹಾರ್ದದಿಂದ ಬದುಕುತ್ತಿರುವುದು
ವಿಶೇಷವಾಗಿದೆ. ಗ್ರಾಮದಲ್ಲಿ ಕೃಷಿಕರೇ ಹೆಚ್ಚು. ಇತ್ತೀಚಿನ ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ಆಗುತ್ತಿದೆ.
ರಾಮಭದ್ರಯ್ಯ
ಅರ್ಚಕ, ರಾಮಲಿಂಗೇಶ್ವರ ದೇವಸ್ಥಾನ, ಬೈರಾಪುರ
*
ಬೈರಾಪುರ ಗ್ರಾಮದಲ್ಲಿ 7 ಐತಿಹಾಸಿಕ ದೇವಸ್ಥಾನಗಳಿವೆ. ಗ್ರಾಮದಲ್ಲಿ ಸರ್ವ ಜಾತಿಯವರೂ
ವಿಶ್ವಾಸದಿಂದಲೇ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಹಲವು ಹಬ್ಬ ಹರಿ ದಿನವನ್ನು
ಆಚರಣೆ ಮಾಡಲಾಗುತ್ತಿದೆ. ಈ ಗ್ರಾಮದಲ್ಲಿ ಜನಿಸಿರುವುದು ನಮ್ಮ ಹೆಮ್ಮೆ.
ಹರೀಶ
ಗ್ರಾಪಂ ಮಾಜಿ ಸದಸ್ಯ, ಬೈರಾಪುರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net