ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ

ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತ ಸಂಘದ ಕಾರ್ಯಕರ್ತರು ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತ ಸಂಘದ ಕಾರ್ಯಕರ್ತರು ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
Published on

ಶ್ರೀರಂಗಪಟ್ಟಣ:

ತಮಿಳುನಾಡಿಗೆ ನೀರು ಹರಿಸಲು ಶಿಫಾರಸ್ಸು ಮಾಡಿದ ಕಾವೇರಿ ನೀರು ನಿಯಂತ್ರಣ ಮಂಡಳಿ ವಿರುದ್ಧ ರೈತ ಸಂಘದ ಕಾರ್ಯಕರ್ತರು ರಸ್ತೆ ಸಂಚಾರ ತಡೆದು ಆಕ್ರೋಶ ಹೊರಹಾಕಿದರು.

ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಮಂಗಳವಾರ ಜಮಾವಣೆಗೊಂಡ ಕಾರ್ಯಕರ್ತರು, ಕೆಲಕಾಲ ವಾಹನ ಸಂಚಾರ ತಡೆದರು. ತಾಲೂಕು ಅಧ್ಯಕ್ಷ ಶಂಭುಗೌಡ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಮಂಡಳಿ ಹಾಗೂ ಪ್ರಾಧಿಕಾರ ತಮಿಳುನಾಡು ಪರವಾಗಿ ಏಕಪಕ್ಷೀಯವಾಗಿ ನಿಲುವು ತಾಳುತ್ತಿದ್ದು, ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ತಾಳುವುದು ಸರ್ವಕಾಲಕ್ಕೂ ಅನ್ವಯಿಸಿದೆ. ಕೆಲ ದಿನಗಳ ಹಿಂದೆ ತೀವ್ರ ಬರಗಾಲದ ನಡುವೆಯೂ ನೀರು ಬಿಡಲು ಸಮಿತಿ ಆದೇಶ ನೀಡಿದ್ದು, ಮತ್ತೆ ನೀರು ಬಿಡಿಸುವ ಹುನ್ನಾರವನ್ನು ಸಮಿತಿಯ ಅಧಿಕಾರಿಗಳು ನಡೆಸುತ್ತಿರುವುದು ಕರ್ನಾಟಕದ ವಿರುದ್ಧ ಇರುವ ದ್ವೇಷ ಮನಸ್ಥಿತಿಯೇ ಕಾರಣ ಎಂದು ಹರಿಹಾಯ್ದರು.
ಮುಖಂಡ ಮರಳಗಾಲ ಕೃಷ್ಣೇಗೌಡ ಮಾತನಾಡಿ, ರಾಜ್ಯ ಸರ್ಕಾರ ಯಾವ ಕಾರಣಕ್ಕೂ ಕನ್ನಡಿಗರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸಬಾರದು. ರಾಜ್ಯದ ಪರವಾಗಿ ತಾಳಿರುವ ನಿಲುವನ್ನು ಕಾಯ್ದು ಕೃಷಿಗೆ, ಜನ-ಜಾನುವಾರುಗಳಿಗೆ ನೀರು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಮುಖಂಡರಾದ ಕಡತನಾಳು ಬಾಲಕೃಷ್ಣ, ಪಾಂಡು, ಡಿ.ಎಂ.ರವಿ, ಬಿ.ಎಸ್.ರಮೇಶ್, ದೊಡ್ಡಪಾಳ್ಯ ಜಯರಾಮು, ಚಂದ್ರು, ಡಿ.ಎಂ.ಕೃಷ್ಣೇಗೌಡ, ನೀಲನಕೊಪ್ಪಲು ಶಶಿಕಾಂತ್, ಕೂಡಲಕುಪ್ಪೆ ತಮ್ಮಣ್ಣ, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಡಿಎಸ್‌ಎಸ್ ಮುಖಂಡ ಗಂಜಾಂ ಹೊನ್ನಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net