ಕೆ.ಎಂ.ದೊಡ್ಡಿ:ಶಾಸಕ, ಸಚಿವರನ್ನು ಖರೀದಿಸುವುದು ಬಿಜೆಪಿಯವರಿಗೆ ಅಭ್ಯಾಸವಾಗಿದೆ. ಮಾತ್ರವಲ್ಲ, ಅವರು ಕೂಡ ಬೇರೆ ಪಕ್ಷಗಳಿಗೆ ಖರೀದಿ ಆಗಿ ರೂಢಿ ಆಗಿ ಬಿಟ್ಟಿದೆ. ಅದ್ದರಿಂದ ವಿಪಕ್ಷ ನಾಯಕರು ಪೇಮೆಂಟ್ ವಿಚಾರ ಮಾತನಾಡುತ್ತಿದ್ದಾರೆ ಎಂದು ಶಾಸಕ ಕೆ. ಎಂ. ಉದಯ್ ಲೇವಡಿ ಮಾಡಿದರು.
ಸಮೀಪದ ಬಿದರಹೊಸಹಳ್ಳಿಯಲ್ಲಿ 3ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ಸ್ಥಾನಕ್ಕೆ ಪೇಮೆಂಟ್ ನಡೆಯುತ್ತಿದೆ ಎಂದಿರುವ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಯಾವ ಶಾಸಕರು ಕೂಡ, ಸಚಿವ ಸ್ಥಾನದ ಕಾರಣಕ್ಕೆ ಹೈಕಮಾಂಡ್ ಹತ್ತಿರ ಹೋಗಿಲ್ಲ ಎಂದರು.
ಹೋರಾಟಗಾರ, ಉತ್ತಮ ನಾಯಕ ಯಡಿಯೂರಪ್ಪ ಮುಂಚೂಣಿಯಲ್ಲಿ ಇದ್ದಾಗಲೇ ಬಹುಮತ ಪಡೆಯಲು ಆಗಲಿಲ್ಲ. ಈಗ ಬಿಜೆಪಿ ಗೆದ್ದು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವುದು ಹಾಸ್ಯಸ್ಪದ ಎಂದು ಲೇವಡಿ ಮಾಡಿದರು.
ನನಗೆ ಅಧಿಕಾರದ ಆಸೆ ಇಲ್ಲ. ಹೊಸಬರ ಪಟ್ಟಿಯಲ್ಲಿ ನಾನಿಲ್ಲ. ನನಗೆ ಸಚಿವ ಸ್ಥಾನದ ಆಸೆಯೂ ಇಲ್ಲ. ನಮ್ಮಲ್ಲಿ ಸಾಕಷ್ಟು ಹಿರಿಯದ್ದಾರೆ. ಅವರಿಗೆ ಅಧಿಕಾರ ಕೊಡಬೇಕು. ಈ ಹಿಂದೆ ಹೈಕಮಾಂಡ್ ಬಳಿ ಮನವಿ ಮಾಡಿದ್ದು ನಿಜ. ಆದರೆ, ಆ ರೇಸ್‌ನಲ್ಲಿ ನಾನಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಮದ್ದೂರು ಕ್ಷೇತ್ರದಲ್ಲಿ ಕ್ಷೀಪ್ರಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, 15ವರ್ಷಗಳಿಂದ ನಡೆಯದ ಕಾಮಗಾರಿಗಳನ್ನು ಹಂತ ಹಂತವಾಗಿ ನೆರವೇರಿಸುತ್ತ ಬಂದಿದ್ದೆನೆ.
ಯಾವುದೇ ಅಭಿವೃದ್ಧಿ ಕೆಲಸ, ಕಾಮಗಾರಿ ನಡೆಯಬೇಕಾದರೆ, ಗ್ರಾಮಸ್ಥರ ಸಹಾಕರ ಅತ್ಯಗತ್ಯ. ಆದ್ದರಿಂದ ನೀವು ನನ್ನ ಜತೆ ಕೈಜೋಡಿಸಬೇಕು. ಅಧಿಕಾರಿಗಳ ಜತೆ ಸಹಕರಿಸಬೇಕು ಎಂದರು.
ನಿಮ್ಮ ವ್ಯಾಪ್ತಿಯ ಕಾಮಗಾರಿ ಕಳಪೆ ಎಂದು ಕಂಡುಬಂದರೆ ಕೂಡಲೇ ನನ್ನ ಗಮನಕ್ಕೆ ತಂದರೆ, ಅದನ್ನ ಉತ್ತಮವಾಗಿ ಮಾಡಿಸಲು ತಕ್ಷಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವ ವಿಚಾರವಾಗಿ ಈಗಾಗಲೇ ಸರ್ವೇ ಕಾರ್ಯ ಆರಂಭವಾಗಿದೆ. ಶೀಘ್ರದಲ್ಲೇ ಘೋಷಣೆ ಆಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ಭಾರತೀನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎ.ಎಸ್.ರಾಜೀವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದೇಶ್, ನಿವೃತ್ತ ಪ್ರಾಧ್ಯಾಪಕ ಬಿ.ಎಸ್ ಬೋರೇಗೌಡ, ಪಾಪಣ್ಣ, ಚಿದಂಬರ, ಪ್ರೇಮ್ ಕುಮಾರ್, ಹನುಮಂತ್, ಅನಿಲ್ ಹನುಮೇಶ್, ಕಿರಣ್, ದೇವೇಗೌಡ ಮತ್ತಿತರರು ಇದ್ದರು.