ಮಂಡ್ಯ: ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಲ್ಲಿ ಒಂದು ಸಸಿನೆಟ್ಟು ಪೋಷಣೆ ಮಾಡಬೇಕು. ಈ ಮೂಲಕ ಪ್ರಕೃತಿ ಮಾತೆಗೆ ಋಣಿಯಾಗಿ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್ ಹೇಳಿದರು.
ನಗರ ಹೊಸಹಳ್ಳಿ-ರಾಮನಹಳ್ಳಿಯಲ್ಲಿರುವ ಸ್ಮಶಾನದ ಆವರಣದಲ್ಲಿ ಬಿಜೆಪಿ ನಗರ ಮಂಡಲದಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಲಹೆಯಂತೆ ತಾಯಿಯ ಹೆಸರಲ್ಲಿ ಒಂದು ಗಿಡ ನೆಡುವ ಅಭಿಮಾನಕ್ಕೆ ಚಾಲನೆ ನೀಡಲಾಗಿದೆ. ತಂದೆ, ತಾಯಿ ಹಾಗೂ ಪರಿಸರದ ಋಣ ತೀರಿಸಲು ಸಾಧ್ಯವಿಲ್ಲ. ಪ್ರಕೃತಿಯನ್ನು ಸಂರಕ್ಷಣೆ ಮಾಡಿದರೆ, ಪರಿಸರ ನಮ್ಮನ್ನು ಸಂಕ್ಷಿಸುತ್ತದೆ ಎಂದು ನುಡಿದರು.
ಅಭಿಯಾನದ ಅಂಗವಾಗಿ ದೇಶಾದ್ಯಂತ ಕೋಟ್ಯಂತರ ಗಿಡ ನೆಡುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ಹಾಗೂ ವಿವಿಧ ರಾಜ್ಯ ಸರ್ಕಾರಗಳು ಸಕ್ರಿಯವಾಗಿ ಭಾಗವಹಿಸುತ್ತಿವೆ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವುದು, ಹಸಿರು ವಲಯವನ್ನು ಹೆಚ್ಚಿಸುವುದು. ಅಂತೆಯೇ ಹೆತ್ತ ತಾಯಿ ಹಾಗೂ ಭೂಮಿ ತಾಯಿಗೆ ಗೌರವ ಸಲ್ಲಿಸುವುದು ಇದರ ಮುಖ್ಯ ಆಶಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿವೇಕ್, ನಗರ ಮಂಡಲ ಅಧ್ಯಕ್ಷ ಪ್ರಸನ್ನ, ಚಂದ್ರ, ಶಿವಕುಮಾರ್ ಕೆಂಪಯ್ಯ, ಹೊಸಹಳ್ಳಿ ಶಿವು, ಸಿದ್ದರಾಜ್‌ಗೌಡ, ಆನಂದ್, ಕ್ರಾಂತಿಮಂಜು, ಯೋಗೇಶ್ ಇತರರಿದ್ದರು.