ಹಲಗೂರು: ಇಲ್ಲಿನ ಗುಂಡಾಪುರದ ಬೆಟ್ಟದರಸಮ್ಮನ ದೊಡ್ಡ ಜಾತ್ರೆ ಮಂಗಳವಾರ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿ ದೇವರಿಗೆ ಪೂಜೆ ಸಲ್ಲಿಸಿದರು.
ಮಾ.4ರಂದು ಮೊದಲನೇ ಪೂಜೆಯಿಂದ ಪ್ರಾರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ದಿನನಿತ್ಯ ಪೂಜಾ ಕಾರ್ಯಕ್ರಮಗಳು ಜರುಗುತ್ತಾ ಬಂದಿದ್ದವು. ಮಂಗಳವಾರ ದೊಡ್ಡ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಹಾಗೂ ರಾಜ್ಯಾದ್ಯಂತ ಅಪಾರ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಹಲಗೂರು, ಗುಂಡಾಪುರ, ಕೆಂಪಯ್ಯನ ದೊಡ್ಡಿ, ನಂದಿಪುರ, ಎಚ್.ಬಸಾಪುರ, ದಳವಾಯಿ ಕೋಡಿಹಳ್ಳಿ, ದೇವಿರಹಳ್ಳಿ, ಬಾಳೆಹೊನ್ನಿಗ, ಹಗಾದೂರು, ಬಸವನಹಳ್ಳಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಹೆಚ್ಚು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಜಾತ್ರೆಯ ದಿವಸ ಭಕ್ತಾದಿಗಳು ಎತ್ತಿನಗಾಡಿಯಲ್ಲಿ ಬೆಲ್ಲದ ಪಾನಕ, ಮಜ್ಜಿಗೆ ಮಾಡಿಕೊಂಡು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಬಿಸಿಲಿನ ತಾಪವನ್ನು ನೀಗಿಸಲು ಹರಕೆ ಹೊತ್ತು ಭಕ್ತರಿಗೆ ಹಂಚುತ್ತಾರೆ. ಮುತ್ತೈದೆಯರು ಅರಿಶಿನ ಕುಂಕುಮ ನೀಡಿ ಹೆಸರುಬೇಳೆ, ಪಾನಕ ನೀಡಿದರು.
ಮುಂಜಾಗ್ರತೆ ಕ್ರಮವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಧರ್ ಮತ್ತು ಎಸ್‌ಐ ಲೋಕೇಶ್ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.