ಪಾಂಡವಪುರ ತಾಲೂಕಿನ ಚಿನಕುರಳಿ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ವಿತರಿಸಲಾಯಿತು. ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ, ಸಿಇಒ ಸಿ.ಪಿ.ಶಿವರಾಜು, ಪ್ರಾಂಶುಪಾಲ ಡಾ.ನಿಶಾಂತ್ ಎ ನಾಯ್ಡು, ಆಡಳಿತಾಧಿಕಾರಿ ನಿವೇದಿತಾ ನಾಗೇಶ್ ಇತರರಿದ್ದರು.
ಪಾಂಡವಪುರ: ಪದವಿ ವಿದ್ಯಾರ್ಥಿಗಳು ಭಾಷೆ ಮೇಲೆ ಪ್ರಬುದ್ಧತೆ ಸಾಧಿಸಿ ಅತ್ಯುತ್ತಮ ಇಂಗ್ಲಿಷ್ ಭಾಷಾ ಪರಿಣಿತಿ ಹೊಂದಿದರೆ ಪ್ರಪಂಚದ ಯಾವುದೇ ಭಾಗಕ್ಕೆ ಹೋಗಿ ಸಾಧನೆ ಮಾಡಬಹುದು ಎಂದು ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಹೇಳಿದರು.
ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪದವಿ ಪ್ರಮಾಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಪದವಿ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿದ್ದು, ಪದವಿಯೊಂದಿಗೆ ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡಬೇಕು ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿಗಳು ಪದವಿ ಪಡೆಯುವುದರೊಂದಿಗೆ ಪಾಲಕರ ಆಶೋತ್ತರಗಳನ್ನು ಈಡೇರಿಸುವವರಾಗಬೇಕು. ತಂದೆ- ತಾಯಿಯ ಶ್ರಮ ಅರಿತು ಅವರಿಗೆ ಗೌರವ ನೀಡಿದಾಗ ಮಾತ್ರ ಶಿಕ್ಷಿತರಾಗಿದ್ದಕ್ಕೂ ಸಾರ್ಥಕ ಎಂಧರು.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಎಂ.ಎನ್.ಚಂದು, ಜೆ.ಜೆ.ಸೌಜನ್ಯಾ, ಆರ್.ರುಚಿತಾ, ಎಸ್.ಎಲ್.ಸಿಂಚನಾ, ಸಿ.ಎನ್.ಅಭಿಲಾಷ್, ಬಿ.ಕೆ.ಸೋನು, ಇ.ನಿಶ್ಚಿತಾಗೆ ಬೆಳ್ಳಿ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
ಹಂಪಿಯ ಕನ್ನಡ ವಿವಿಯಿಂದ ಡಾಕ್ಟರೇಟ್ ಪಡೆದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ಅವರಿಗೆ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ 50 ಸಾವಿರ ರೂ. ನೀಡಿ ಗೌರವಿಸಲಾಯಿತು. ಇದೇ ವೇಳೆ ಕಾಲೇಜಿನ ಒಟ್ಟು 232 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು, ಪ್ರಾಂಶುಪಾಲ ಡಾ.ನಿಶಾಂತ್ ಎ ನಾಯ್ಡು, ಸಂಸ್ಥೆಯ ಆಡಳಿತಾಧಿಕಾರಿ ನಿವೇದಿತಾ ನಾಗೇಶ್, ಸಿಂಡಿಕೇಟ್ ಸದಸ್ಯ ಪ್ರೊ.ನಾಗರಾಜು, ಎಸ್‌ಟಿಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಾರುತಿ.ಟಿ., ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪಲ್ಲವಿ ಇತರರು ಇದ್ದರು.