ಬರ, ಮುಂಗಾರು ಎದುರಿಸಲು ಸನ್ನದ್ಧರಾಗಿ

 ನಾಗಮಂಗಲ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಕೆಡಿಪಿ ಸಭೆ ನಡೆಯಿತು. ಸತೀಶ್, ಚಲುವರಾಜು, ಅಶೋಕ್ ಇದ್ದರು.
ನಾಗಮಂಗಲ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಕೆಡಿಪಿ ಸಭೆ ನಡೆಯಿತು. ಸತೀಶ್, ಚಲುವರಾಜು, ಅಶೋಕ್ ಇದ್ದರು.
Published on
ನಾಗಮಂಗಲ: ಬರಗಾಲ ಹಾಗೂ ಮುಂಗಾರು ಒಟ್ಟೊಟ್ಟಿಗೆ ಬರುತ್ತಿದ್ದು ಎರಡೂ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಿರಬೇಕು. ಮಳೆಯಿಂದ ಹಾನಿಯಾದರೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ತಕ್ಷಣವೇ ಸ್ಪಂದಿಸಿ ಪರಿಹಾರ ನೀಡುವ ಕೆಲಸ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಳೆಯಿಂದ ಹಾನಿಯಾದರೆ ಯಾವುದೇ ಕಾರಣಕ್ಕೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ರೈತರಿಗೆ ಬರಗಾಲದಿಂದ ನಷ್ಟವಾದರೆ ಅಲ್ಪ ಮೊತ್ತವಾಗಿರುತ್ತದೆ. ಅದೇ ಮಳೆಯಿಂದ ಹಾನಿಯಾದರೆ ಬೆಳೆಗೆ ವೆಚ್ಚ ಮಾಡಿದ ಹಣವೆಲ್ಲ ನಷ್ಟವಾಗಲಿದೆ. ಮಳೆಹಾನಿ ಪರಿಹಾರದಲ್ಲಿ ನಿರ್ಲಕ್ಷ್ಯವಾದರೆ ಯಾವುದೇ ಮುಲಾಜಿಗೆ ಒಳಗಾಗದೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇನೆ. ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ, ಶಾಲಾ ಕಟ್ಟಡಗಳಿದ್ದರೆ ಶೀಘ್ರ ಮಾಹಿತಿ ಕೊಡಿ. ಅವುಗಳ ದುರಸ್ತಿಗೆ ಕ್ರಮವಹಿಸಲಾಗುವುದು ಎಂದರು.
3 ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಹೆಚ್ಚು ಅಭಿವೃದ್ಧಿ ಕೆಲಸಗಳಾಗುತ್ತಿವೆ. ಇಲಾಖಾವಾರು ಅನುದಾನ ಶೇ.100 ಸದ್ಬಳಕೆಯಾಗುತ್ತಿದೆ. ಇದರ ಹಿಂದೆ ಇಲಾಖೆ ಅಧಿಕಾರಿಗಳ ಶ್ರಮವಿದೆ. ವಿವಿಧ ಅಭಿವೃದ್ಧಿ ಕೆಲಸಗಳ ನಡುವೆ ಯಥಾಸ್ಥಿತಿಯಲ್ಲಿರುವ ಗ್ಯಾರಂಟಿ ಯೋಜನೆಗಳು, ಸಹಾಯಧನ, ಮಾಸಾಶನ ಸರಿಯಾಗಿ ಫಲಾನುಭವಿಗಳಿಗೆ ತಲುಪುತ್ತಿವೆ. ಜಿಪಂ ಹಾಗೂ ಲೋಕೋಪಯೋಗಿ ಇಲಾಖೆ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಡಿಸೆಂಬರ್ ಅಂತ್ಯದೊಳಗೆ ಟೆಂಡರ್ ಆಗಿರುವ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಬೇಕು. ನಾಲೆ ಆಧುನೀಕರಣ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವುದರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೇಮಾವತಿ ಇಲಾಖೆ ಇಂಜಿನಿಯರ್‌ಗಳಿಗೆ ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ಅಶೋಕ್, ತಾಪಂ ಇಒ ಸತೀಶ್, ಡಿವೈಎಸ್ಪಿ ಚಲುವರಾಜು, ಕೆಡಿಪಿ ಸದಸ್ಯರಾದ ರಮೇಶ್, ಎನ್.ಜೆ.ರಾಜೇಶ್, ರಮೇಶ್ ಮತ್ತಿತರಿದ್ದರು.
ರೈತರಿಗೆ ಜಾಗೃತಿ ಮೂಡಿಸಿ
ಕಳೆದ ವರ್ಷ 3.5 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಕೊರತೆಯಾಗಿದೆ. ಈ ಬಾರಿ ಪ್ರಧಾನಿ ಅವರೇ ರಸಗೊಬ್ಬರ ಕಡಿಮೆ ಬಳಸಿ ಎಂದು ಕರೆಕೊಟ್ಟಿದ್ದಾರೆ. ಕೇಂದ್ರ ಸರ್ಕಾರದಿಂದ ಈ ಬಗ್ಗೆ ಸೂಚನೆಯಿದ್ದು, ಯಾವ ಬೆಳೆಗೆ ಎಷ್ಟು ಅವಶ್ಯವಿದೆ ಅಷ್ಟು ಮಾತ್ರ ಬಳಕೆ ಮಾಡುವಂತೆ ರೈತರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಅಕ್ರಮವಾಗಿ ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕೃಷಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸಲಿದ್ದಾರೆ. ಮುಂಗಾರು ಗಮನದಲ್ಲಿಟ್ಟುಕೊಂಡು ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿ. ಜಮೀನು ಇಲ್ಲದವರು ರಸಗೊಬ್ಬರ ಪಡೆಯುತ್ತಿದ್ದರು. ಆದರೆ, ಈ ಬಾರಿ ಎಫ್‌ಐಡಿ ಸಂಖ್ಯೆ ಆಧಾರದ ಮೇಲೆ ರಸಗೊಬ್ಬರ ನೀಡಲಾಗುವುದು. ಜಮೀನು ಇಲ್ಲದವರು ರಸಗೊಬ್ಬರ ಪಡೆಯಲು ಈ ಬಾರಿ ಸಾಧ್ಯವಿಲ್ಲ ಎಂದರು.
ಸೆಸ್ಕ್‌ನವರು ಪೂರ್ಣ ಮಾಹಿತಿ ಕೊಡಲಿ
ಸೆಸ್ಕ್ ಬಗ್ಗೆ ಈಗಲೂ ದೂರುಗಳು ಬರುತ್ತಿವೆ. ಮೊದಲಿಗಿಂತ ಕಡಿಮೆಯಾಗಿದ್ದು, ದೂರುಗಳು ಬಾರದಂತೆ ಕೆಲಸ ಮಾಡಬೇಕು. ಕಳೆದ 3 ವರ್ಷದಲ್ಲಿ ತಾಲೂಕಿನಲ್ಲಿ ಎಷ್ಟು ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಲಾಗಿದೆ, ಬದಲಾಯಿಸಲಾಗಿದೆ, ಏನೆಲ್ಲಾ ಯೋಜನೆಗಳು ಆಗಿವೆ ಎಂಬ ಸಂಪೂರ್ಣ ಮಾಹಿತಿ ನೀಡಿ. ನಿರಂತರ ಜ್ಯೋತಿ ಯೋಜನೆಯಡಿ ಎಲ್ಲಿ ಕಾಮಗಾರಿ ಲೋಪವಿದೆ ಅವುಗಳನ್ನು ಪೂರ್ಣಗೊಳಿಸಿ. ಬೆಳ್ಳೂರು ಮತ್ತು ನಾಗಮಂಗಲ ವಿಭಾಗದ ಎಇಇ ಕಚೇರಿಯ ನೂತನ ಕಟ್ಟಡಗಳ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಮುಂದಿನ ದಿನಗಳಲ್ಲಿ 2 ರಿಂದ 3 ಹೊಸ ಕೆಇಬಿ ಸ್ಟೇಷನ್‌ಗಳನ್ನು ತರಲಾಗುತ್ತಿದೆ. ಅಂಚೆಚಿಟ್ಟನಹಳ್ಳಿ ಹಾಗೂ ಬುರುಡುಗುಂಟೆಯಲ್ಲಿ ನೂತನ ಸ್ಟೇಷನ್‌ಗೆ ಜಾಗ ಗುರುತಿಸಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದರು.
ಸರ್ವೆ ಮಾಡಿ
ಗೃಹಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಬಗ್ಗೆ ಸಿಡಿಪಿಒ ಇಲಾಖೆ ಸೂಪರ್‌ವೈಸರ್‌ಗಳು ಮನೆಗಳಿಗೆ ತೆರಳಿ ಯಾವ ಯಾವ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆಂಬ ಮಾಹಿತಿ ಕಲೆಹಾಕಿ ಗ್ರಾಮವಾರು ವರದಿ ಸಿದ್ಧಪಡಿಸಬೇಕು. ಗ್ಯಾರಂಟಿ ಯೋಜನೆಗಳು ತಲುಪುತ್ತಿವೆಯೇ, ಇಲ್ಲವೇ ಎಂಬ ಮಾಹಿತಿ ಕಲೆಹಾಕುವ ಕೆಲಸ ಮಾಡಬೇಕು. ಈ ಕೆಲಸದ ಬಗ್ಗೆ ಸಾರ್ವಜನಿಕರಿಂದ ನಾನೇ ಖುದ್ದು ಮಾಹಿತಿ ಪಡೆಯುತ್ತೇನೆ. ಲೋಪವಾದರೆ ಸಿಡಿಪಿಒ ಅವರನ್ನು ಹೊಣೆ ಮಾಡಿ ಮನೆಗೆ ಕಳುಹಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಬೇಸಿಗೆಯಲ್ಲೂ ಕೆರೆ-ಕಟ್ಟೆಗಳಿಗೆ ನೀರು
ಹೇಮಾವತಿಯಿಂದ ಕೆರೆ-ಕಟ್ಟೆಗಳನ್ನು ತುಂಬಿಸಲು ನೀರು ಬಿಡಲಾಗಿತ್ತು. ಆದರೆ, ಕೆ.ಆರ್.ಪೇಟೆ ಮತ್ತು ಪಾಂಡವಪುರದಲ್ಲಿ ತೊಂದರೆಗಳಾಗಿದ್ದರಿಂದ ತಾಲೂಕಿಗೆ ನಿರೀಕ್ಷೆಯಷ್ಟು ನೀರು ಬರಲಿಲ್ಲ. ಸೂಳೆಕೆರೆಗೆ ಹೇಮಾವತಿಯಿಂದ ನೀರು ತುಂಬಿಸುವ ಕೆಲಸವಾಗುತ್ತಿದೆ. ಬೇಸಿಗೆ ಸಮಯದಲ್ಲಿ ಹೇಮಾವತಿಯಿಂದ ನೀರು ತರುವುದು ಒಂದು ದೊಡ್ಡ ಸಾಹಸ. ಮುಂದಿನ ಎರಡು ದಿನಗಳ ಕಾಲ ನೀರು ಬಿಡಲು ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಕುಡಿಯುವ ನೀರಿಗೆ 3 ಕೋಟಿ ರೂ.
ಸಚಿವ ಚಲುವರಾಯಸ್ವಾಮಿ ಮಾತನಾಡಿ, ಜೆಜೆಎಂಗೆ ಸಂಬಂಧಿಸಿದ ಅನುದಾನ 15,000 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರ್ಕಾರದಿಂದ ಕುಡಿಯುವ ನೀರಿನ ಯೋಜನೆಯಿಂದ ಜನರಿಗೆ ತೊಂದರೆಯಾಗಬಾರದೆಂದು ಹೆಚ್ಚು ಅನುದಾನ ಬಳಕೆ ಮಾಡಿದ್ದೇವೆ. ಡಿಸೆಂಬರ್‌ಗೆ ಜೆಜೆಎಂ ಕಾಮಗಾರಿ ಪೂರ್ಣಗೊಳ್ಳಬೇಕು. ಪೈಪ್‌ಲೈನ್, ಮೇಜರ್ ಟ್ಯಾಂಕ್ ಯಾವುದೇ ಕಾಮಗಾರಿಗಳಲ್ಲಿ ವಿಳಂಬವಿರಬಾರದು. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ಟಾಸ್ಕ್‌ಫೋರ್ಸ್ ಮೂಲಕ ಮೊದಲ ಹಂತವಾಗಿ 3 ಕೋಟಿ ರೂ.ಗಳನ್ನು ಜಿಲ್ಲೆಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದರು.
ಜೂನ್ 9 ರಂದು ಬೃಹತ್ ಆರೋಗ್ಯ ಶಿಬಿರ
ಕೊಪ್ಪ ಸೇರಿದಂತೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಆದಿಚುಂಚನಗಿರಿ ಮಹಾವಿದ್ಯಾಲಯ, ಜಯದೇವ ಆಸ್ಪತ್ರೆ, ಮಂಡ್ಯ ಮಿಮ್ಸ್ ಸೇರಿದಂತೆ ಇನ್ನಿತರ ಪ್ರತಿಷ್ಠಿತ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಜೂ.9 ರಂದು ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗುತ್ತಿದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಚಿವ ದಿನೇಶ್‌ಗುಂಡೂರಾವ್ ಉದ್ಘಾಟಿಸಲಿದ್ದಾರೆ. ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದರ ಯಶಸ್ವಿಗೆ ಶ್ರಮಿಸಬೇಕಿದೆ. ಪಂಚಾಯಿತಿವಾರು ಬಸ್‌ಗಳನ್ನು ಬಿಡಲಾಗುವುದು. ಜನರು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net