ಕೆ.ಆರ್.ಪೇಟೆ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಗ್ರಾಮವಾರು ನೀರಿನ ಲಭ್ಯತೆ ಮತ್ತು ಬೇಡಿಕೆ ಪರಿಶೀಲಿಸಿ, ಕೊರತೆ ಉಂಟಾಗುವ ಸಾಧ್ಯತೆ ಇರುವ ಗ್ರಾಮಗಳನ್ನು ಮುಂಚಿತವಾಗಿ ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಚಿಕ್ಕೋನಹಳ್ಳಿ ಫಾರ್ಮ್ ಸಭಾ ಭವನದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಶಾಸಕ ಎಚ್.ಟಿ.ಮಂಜು ಹಾಗೂ ಜಿಪಂ ಸಿಇಒ ನಂದಿನಿ ಉಪಸ್ಥಿತಿಯಲ್ಲಿ ನಡೆದ ಬರ ನಿರ್ವಹಣೆ, ಕುಡಿಯುವ ನೀರು, ನಿವೇಶನ ಹಂಚಿಕೆ ಹಾಗೂ ವಿವಿಧ ಅಭಿವೃದ್ಧಿ ವಿಷಯಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕೊಳವೆಬಾವಿ, ಪಂಪ್‌ಸೆಟ್ ಹಾಗೂ ಪೈಪ್‌ಲೈನ್‌ಗಳ ದುರಸ್ತಿಯನ್ನು ವಿಳಂಬವಿಲ್ಲದೆ ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಪರ್ಯಾಯ ನೀರಿನ ಮೂಲಗಳನ್ನು ಗುರುತಿಸಿ, ಅನಿವಾರ್ಯ ಸಂದರ್ಭಗಳಲ್ಲಿ ಟ್ಯಾಂಕರ್ ಮೂಲಕ ಪೂರೈಕೆ ಮಾಡಲು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಜಲಜೀವನ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಪರಿಶೀಲಿಸಿ, ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಪೂರ್ಣಗೊಂಡ ಯೋಜನೆಗಳ ಮೂಲಕ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕಿನ ಕೆರೆ-ಕಟ್ಟೆಗಳಲ್ಲಿನ ನೀರಿನ ಸಂಗ್ರಹ, ಅಂತರ್ಜಲ ಮಟ್ಟ ಹಾಗೂ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಯಿತು. ಬರ ಪರಿಸ್ಥಿತಿಯಿಂದ ಕೃಷಿ ಚಟುವಟಿಕೆ ಮೇಲೆ ಉಂಟಾಗಬಹುದಾದ ಪರಿಣಾಮದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಜಾನುವಾರುಗಳಿಗೆ ಅಗತ್ಯವಿರುವ ಮೇವಿನ ಲಭ್ಯತೆ ಹಾಗೂ ಬರ ಪರಿಸ್ಥಿತಿಯಲ್ಲಿ ಎದುರಾಗಬಹುದಾದ ತುರ್ತು ಸನ್ನಿವೇಶಗಳನ್ನು ಸಮರ್ಥವಾಗಿ ನಿರ್ವಹಿಸಲು ಸಂಬಂಧಪಟ್ಟ ಇಲಾಖೆಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಅರ್ಹರಿಗೆ ನಿವೇಶನ:
ವಸತಿ ಹಾಗೂ ನಿವೇಶನ ರಹಿತ ಅರ್ಹ ಕುಟುಂಬಗಳನ್ನು ಗುರುತಿಸಿ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸೂಚಿಸಲಾಯಿತು. ಗ್ರಾಮವಾರು ಸರ್ಕಾರಿ ಜಮೀನು ಗುರುತಿಸಿ, ನಿವೇಶನ ಪ್ರದೇಶಗಳಲ್ಲಿ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕೃಷಿ, ಪಶುಸಂಗೋಪನೆ, ನರೇಗಾ ಕಾಮಗಾರಿಗಳು, ಜಲ ಸಂರಕ್ಷಣೆ ಹಾಗೂ ವಿದ್ಯುತ್ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳೀಯ ಹಂತದಲ್ಲಿಯೇ ತ್ವರಿತ ಪರಿಹಾರ ದೊರೆಯುವಂತೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಕೆ.ಆರ್.ಪೇಟೆ ತಹಸೀಲ್ದಾರ್ ಶ್ರೇಯಸ್, ತಾಪಂ ಇಒ ಸುಷ್ಮಾ, ಕಸಬಾ ಕಂದಾಯ ನಿರೀಕ್ಷಕ ಜ್ಞಾನೇಶ್, ಬೂಕನಕೆರೆ ನಿರೀಕ್ಷಕಿ ಚಂದ್ರಕಲಾ, ಜಿಪಂ ಕುಡಿಯುವ ವಿಭಾಗದ ಸಹಾಯಕ ಇಂಜಿನಿಯರ್ ಪ್ರವೀಣಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.