ಬಸವಣ್ಣನ ಸಂದೇಶ ಇಂದಿಗೂ ಪ್ರಸ್ತುತ: ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಮತ

ಮಂಡ್ಯ ನಗರದಲ್ಲಿರುವ ವೀರಶೈವ ವಿದ್ಯಾರ್ಥಿ ನಿಲಯ ಆವರಣದಲ್ಲಿ ಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಕೆ.ಎಸ್.ಷಡಕ್ಷರಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯ ನಗರದಲ್ಲಿರುವ ವೀರಶೈವ ವಿದ್ಯಾರ್ಥಿ ನಿಲಯ ಆವರಣದಲ್ಲಿ ಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಕೆ.ಎಸ್.ಷಡಕ್ಷರಿ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಬಸವಶ್ರೀ ಪ್ರಶಸ್ತಿ ಪ್ರದಾನ
  • ನಂಜಮ್ಮ ಮೋಟೇಗೌಡ ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ ಕೊಪ್ಪದಿಂದ ಆಯೋಜನೆ
ಮಂಡ್ಯ: ವಿಶ್ವಗುರು ಬಸವವಣ್ಣನವರು 12ನೇ ಶತಮಾನದಲ್ಲಿ ನೀಡಿದ ಸಮಸಮಾಜ ನಿರ್ಮಾಣದ ಸಂದೇಶ ಇಂದಿಗೂ ಪ್ರಸ್ತುತ ಎಂದು ನಂಜಮ್ಮ ಮೋಟೇಗೌಡ ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.
ನಗರದ ವೀರಶೈವ ವಿದ್ಯಾರ್ಥಿ ನಿಲಯ ಆವರಣದಲ್ಲಿ ನಂಜಮ್ಮ ಮೋಟೇಗೌಡ ಚಾರಿಟಬಲ್ ಮತ್ತು ಎಜುಕೇಷನ್ ಟ್ರಸ್ಟ್ ಕೊಪ್ಪ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಅಚ್ಚಕನ್ನಡದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿ ವಚನಗಳ ರಚಿಸಿ ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಅನುಭವ ಮಂಟಪದ ಕಾಯಕಯೋಗಿ ಶರಣರ ಕೊಡುಗೆ ಅನುಪಮ ಎಂದು ನುಡಿದರು.
ವಿಶ್ವದ ಮೊದಲ ಸಂಸತ್ ಎಂದೇ ಕರೆಯಲ್ಪಡುವ ಅನುಭವ ಮಂಟಪ ಎಂದೆಂದಿಗೂ ಅವಿಸ್ಮರಣೀಯ. ಎಲ್ಲ ಸಮುದಾಯದ ಕಾಯಕಯೋಗಿಗಳು ಅನುಭವ ಮಂಟಪದಲ್ಲಿ ಸಾಮಾಜಿಕ ಸುಧಾರಣೆಗೆ ವಚನಗಳ ಮೂಲಕ ಸಂದೇಶಗಳನ್ನು ನೀಡಿದ್ದಾರೆ. ಇಂದಿನ ಮಕ್ಕಳು ಮತ್ತು ವಿದ್ಯಾವಂತ ಸಮುದಾಯ ಬಸವಣ್ಣ ಅವರ ವಚನಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದು ಅತ್ಯಾವಶ್ಯಕ. ನಮ್ಮ ಟ್ರಸ್ಟ್ ವತಿಯಿಂದ ವಾರ್ಷಿಕವಾಗಿ 12 ಪ್ರಶಸ್ತಿಯನ್ನು ಸಾಧಕರಿಗೆ ನೀಡುತ್ತಾ ಬರುತ್ತಿದ್ದೇವೆ. ಎಲೆಮರೆಕಾಯಿಯಂತಿರುವ ಸಾಧಕರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಭಾರತೀಯ ದಾರ್ಶನಿಕ ಸಂತರ ಸಾಲಿನಲ್ಲಿ ಬಸವಣ್ಣ ಅವರು ಧ್ರುವತಾರೆಯಾಗಿದ್ದಾರೆ. ಒಬ್ಬ ಮಹಾತ್ಮರಲ್ಲಿ ಇರಬೇಕಾದ ಎಲ್ಲ ಗುಣಲಕ್ಷಣಗಳನ್ನು ಅವರು ಮೈಗೂಡಿಸಿಕೊಂಡಿದ್ದರು. ಧರ್ಮದ ಚೌಕಟ್ಟಿನಲಿ ಇರದ ಅವರ ಸಂದೇಶ, ವೈಚಾರಿಕ ವಚನಗಳು ವಿಶ್ವಕ್ಕೆ ಅನ್ವಯವಾಗುತ್ತವೆ. ಮನುಕುಲವನ್ನು ಉದ್ದರಿಸುವ ವಚನಗಳನ್ನು ಬಸವಣ್ಣನಾದಿಯಾಗಿ ಎಲ್ಲ ವಚನಕಾರರು ನೀಡಿದ್ದಾರೆ. ಸಾಂಸ್ಕೃತಿಕ ನಾಯಕ, ದಾರ್ಶನಿಕ ಬಸವಣ್ಣ ಅವರ ಹೆಸರಿನಲ್ಲಿ ಕೊಡುವ ಬಸವಶ್ರೀ ಪುರಸ್ಕಾರ ಅರ್ಹರಿಗೆ ಸಲ್ಲುತ್ತಿದೆ ಎಂದು ತಿಳಿಸಿದರು.
ಬಸವಣ್ಣನ ಕುರಿತ ಉಪನ್ಯಾಸ ನೀಡಿದ ಸಾಹಿತಿ ಭವಾನಿ ಲೋಕೇಶ್, ವಚನಕ್ರಾಂತಿಯಿಂದ ಆದಷ್ಟು ಬದಲಾವಣೆ ವಿಶ್ವದಲ್ಲಿ ಎಲ್ಲಿಯೂ ಆಗಿಲ್ಲ. ಆಡುಭಾಷೆಯ ವಚನ ಸಾಹಿತ್ಯ ಕನ್ನಡ ಸಾಹಿತ್ಯ ಬಿಟ್ಟರೆ ವಿಶ್ವದ ಸಾಹಿತ್ಯದ ಯಾವ ಭಾಷೆಯಲ್ಲಿಯೂ ಸಿಗುವುದಿಲ್ಲ. ಜ್ಞಾನದ ಬೆಳಕು, ಅನುಭವದ ನಿಧಿಯಾಗಿ ವಚನಗಳು ಎಂಬುದನ್ನು ಗುರುತಿಸಿದ್ದಾರೆ. ಇದು ನಮ್ಮ ಹೆಗ್ಗಳಿಕೆ. ಅನ್ನದಾಸೋಹ, ವಚನ ದಾಸೋಹ, ಅರಿವು ದಾಸೋಹ 12ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದವು. ಮಹಿಳೆಯರಿಗೆ ಸಮಾನತೆ ಸಾರಿದ್ದು 12ನೇ ಶತಮಾನವಾಗಿದೆ. ಅಲ್ಲಿಂದ ಹೊಸಕ್ರಾಂತಿಯೇ ಶುರುವಾಯಿತು ಎಂದು ಸ್ಮರಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದರಾಜು, ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಎಂ.ಬಿ.ರಾಜಶೇಖರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಅಲಯನ್ಸ್ ಸಂಸ್ಥೆ 1ನೇ ಜಿಲ್ಲಾ ಉಪ ಪ್ರಾಂತಪಾಲ ಕೆ.ಎಸ್.ಚಂದ್ರಶೇಖರ್, ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ರಾಚಯ್ಯ, ದರಸಗುಪ್ಪೆ ಧನಂಜಯ ಇತರರಿದ್ದರು.
ಇದೇ ಸಂದರ್ಭದಲ್ಲಿ ಟ್ರಸ್ಟ್ ಕೊಡಮಾಡುವ ಬಸವಶ್ರೀ ಪ್ರಶಸ್ತಿಯನ್ನು ಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಕೆ.ಎಸ್.ಷಡಕ್ಷರಿ ಅವರಿಗೆ ಪ್ರದಾನ ಮಾಡಲಾಯಿತು. ಗಾಯಕ ಪ್ರಭಾಂಜಲಿ ಡೇವಿಡ್ ಮತ್ತು ತಂಡದಿಂದ ವಚನ ಗಾಯನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net