ಬಸರಾಳು ಸಮೀಪ ಜಾಗ ಪರಿಶೀಲನೆ: ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ ಪ್ರಸ್ತಾವಿತ ಜಾಗ

 ಮಂಡ್ಯ ತಾಲೂಕು ಬಸರಾಳು ಸಮೀಪ ಎಆರ್‌ಎಐ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.‌
ಮಂಡ್ಯ ತಾಲೂಕು ಬಸರಾಳು ಸಮೀಪ ಎಆರ್‌ಎಐ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.‌
Published on

ಪ್ರಮುಖ ಮುಖ್ಯಾಂಶಗಳು

  • ಮುದ್ದನಘಟ್ಟ ಹಾಗೂ ಹೆಗ್ಗಡತಿಹಳ್ಳಿ ಗ್ರಾಮಗಳ ಬಳಿಯ ಜಾಗವನ್ನು ಖುದ್ದು ವೀಕ್ಷಣೆ
  • ಕೇಂದ್ರ ಸಚಿವ ಎಚ್ಡಿಕೆ ಕನಸಿನ ಯೋಜನೆ
ಮಂಡ್ಯ: ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ(ಎಆರ್‌ಎಐ) ಪರೀಕ್ಷಾ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದು ಹೇಳಿರುವ ಪ್ರಸ್ತಾವಿತ ಜಾಗವನ್ನು ಸಂಸ್ಥೆಯ ಉನ್ನತಾಧಿಕಾರಿಗಳು ಪರಿಶೀಲಿಸಿದರು.
ಸಂಸ್ಥೆಯ ಹಿರಿಯ ಉಪ ನಿರ್ದೇಶಕರಾದ ವಿ.ಎ. ಪಂಖಾವಾಲ, ಡಾ.ಬಿ.ವಿ.ಶ್ಯಾಮಸುಂದರ ಹಾಗೂ ಹಿರಿಯ ಪ್ರಧಾನ ವ್ಯವಸ್ಥಾಪಕ ಗಿರೀಶ್‌ ತನವಾಡೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಬಸರಾಳು ಸಮೀಪದಲ್ಲಿರುವ ಮುದ್ದನಘಟ್ಟ ಹಾಗೂ ಹೆಗ್ಗಡತಿಹಳ್ಳಿ ಗ್ರಾಮಗಳ ಬಳಿಯ ಜಾಗವನ್ನು ಖುದ್ದು ವೀಕ್ಷಿಸಿದರು.
ಈ ಎರಡು ಗ್ರಾಮಗಳ ಬಳಿ ಸುಮಾರು 110 ಎಕರೆ ಸರ್ಕಾರಿ ಭೂಮಿ ಲಭ್ಯವಿದೆ ಎಂದು ರಾಜ್ಯ ಸರ್ಕಾರ ತಿಳಿಸಿದ್ದು, ಎಆರ್‌ಎಐ ತಂಡವು ಈ ಭೂಮಿಯನ್ನು ವಿಸ್ತೃತವಾಗಿ ಪರಿಶೀಲನೆ ನಡೆಸಿತು. ಅಲ್ಲದೆ, ಜಾಗಕ್ಕೆ ಸಂಬಂಧಿತ ಅಗತ್ಯ ಮಾಹಿತಿಯನ್ನು ಕಂದಾಯ ಇಲಾಖೆ ಅಧಿಕಾರಿಗಳಿಂದ ಕಲೆ ಹಾಕಿತು. ಈ ಭೂಮಿ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಅನುಕೂಲವಾಗಿವೆಯೇ ಇಲ್ಲವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದದರು. ಈ ತಂಡದ ವರದಿಯ ನಂತರ ತಾಂತ್ರಿಕ ನಿಪುಣರ ತಂಡವು ಈ ಭೂಮಿಗಳನ್ನು ಪರಿಶೀಲನೆ ನಡೆಸಲಿದೆ.
ಭೂಮಿಯ ಸ್ವರೂಪ, ರಸ್ತೆ ಸಂಪರ್ಕ, ನೀರು, ವಿದ್ಯುತ್‌ ಸೇರಿ ಮೂಲಸೌಕರ್ಯಗಳ ಸಂಯೋಜನೆ ಸುಲಭ ಸಾಧ್ಯವೇ ಎಂಬುದರ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಅಲ್ಲದೆ, ತ್ವರಿತವಾಗಿ ತಾಂತ್ರಿಕ ತಂಡವೂ ಸ್ಥಳಕ್ಕೆ ಭೇಟಿ ಕಾರ್ಯಸಾಧ್ಯತಾ ವರದಿಯನ್ನು ನೀಡಲಿದೆ ಎಂದು ಹೇಳಿತು.
ಜಿಲ್ಲಾಧಿಕಾರಿ ಜತೆ ಚರ್ಚೆ: ಸದರಿ ಭೂಮಿಯನ್ನು ವೀಕ್ಷಿಸಿದ ನಂತರ ಎಆರ್‌ಎಐ ಅಧಿಕಾರಿಗಳ ತಂಡ ಜಿಲ್ಲಾಧಿಕಾರಿ ಡಾ.ಕುಮಾರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಅಗತ್ಯವಿರುವ ಭೂಮಿ ಹೇಗಿರಬೇಕು ಎಂಬ ಪ್ರಾಥಮಿಕವಾಗಿ ಡಿಸಿಯೊಂದಿಗೆ ಅಧಿಕಾರಿಗಳು ಚರ್ಚಿಸಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಎಆರ್‌ಎಐ ತಂಡ ಬಸರಾಳು ಭೂಮಿಯನ್ನು ಪ್ರಾಥಮಿಕ ಪರಿಶೀಲನೆ ನಡೆಸಿದೆ. ಬಸರಾಳು ಹತ್ತಿರದ ಭೂಮಿ ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ ಸೂಕ್ತವಾಗಿದೆ ಎಂದು ಹೇಳಿದೆಯೇ ವಿನಾ ಅಲ್ಲಿಯೇ ಕಾರ್ಯ ಸಾಧ್ಯತೆ ಆಗುತ್ತದೆಯೇ ಎಂಬುದನ್ನು ಹೇಳಿಲ್ಲ. ಅಲ್ಲದೆ, ಈಗ ಬಂದಿರುವ ಮೂವರು ಅಧಿಕಾರಿಗಳ ತಂಡವು ಇಪ್ಪತ್ತು ದಿನಗಳಲ್ಲಿ ವರದಿ ನೀಡಲಿದ್ದು, ಆ ವರದಿ ಪರಿಶೀಲನೆ ನಂತರ ತಾಂತ್ರಿಕ ತಂಡ ಜಿಲ್ಲೆಗೆ ಭೇಟಿ ನೀಡಲಿದೆ ಎಂದು
ಹೇಳಿದರು.

ಸಚಿವರ ಕನಸು ಈಡೇರುವುದಕ್ಕೆ ದೊಡ್ಡ ಹೆಜ್ಜೆ
ಮಂಡ್ಯದಲ್ಲಿ ಕೇಂದ್ರದ ಬೃಹತ್‌ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಜನತೆಗೆ ಭರವಸೆ ನೀಡಿದ್ದರು.
ಮಾ.14ರಂದು ವಿ.ಸಿ. ಫಾರ್ಮ್‌ನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಿದ ಸಭೆಯಲ್ಲಿ ಮಾತನಾಡಿದ್ದ ಎಚ್ಡಿಕೆ, ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಯ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಹೇಳಿದ್ದರು. ಅದಾದ ಎರಡು ದಿನಗಳಲ್ಲಿಯೇ ಆ ಸಂಸ್ಥೆಯ ಉನ್ನತಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಯೋಜನೆಗೆ ಆರಂಭಿಕ ಹಂತದಲ್ಲಿ 500 ಕೋಟಿ ರೂ, ನಂತರದ ದಿನಗಳಲ್ಲಿ ಇನ್ನೂ 500 ಕೋಟಿ ರೂ ಹೂಡಿಕೆ ಮಾಡಲಾಗುವುದು. ಇದರಿಂದ ಮಂಡ್ಯದ ಅಭಿವೃದ್ಧಿಗೆ ಬಲ ಬರುವುದು ಮಾತ್ರವಲ್ಲದೆ, ಕರ್ನಾಟಕದಲ್ಲಿ ಆಟೋಮೊಬೈಲ್‌ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಸಚಿವರು ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net