ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿರವರಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾ ಶಂಕರ ನೇತೃತ್ವದಲ್ಲಿ ರಾಜ್ಯ ಮತ್ತು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಮದ್ದೂರು ನಗರದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು. ಎಂ.ಸಿ.ಲಿಂಗರಾಜು, ವೀರಪ್ಪ, ರಮೇಶ್, ಮಹೇಶ್, ವೀರೇಶ್, ನಾಗಣ್ಣ, ನಿರಂಜನ್ ಇತರರು ಹಾಜರಿದ್ದರು.
ಮದ್ದೂರು: ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ನೇತೃತ್ವದಲ್ಲಿ ರಾಜ್ಯ ಮತ್ತು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನಿಂದ ಮಂಡ್ಯಕ್ಕೆ ಹೋಗುವ ಮಾರ್ಗಮಧ್ಯೆ ನಗರದಲ್ಲಿ ವೇದಿಕೆ ವತಿಯಿಂದ ಭಾನುವಾರ ಮನವಿ ಸಲ್ಲಿಸಿ ಮಾತನಾಡಿದ ವಿ.ಸಿ.ಉಮಾಶಂಕರ್, ಮುಂಗಾರು ಮಳೆ ವಿಲದಿಂದ ನಾಡಿನ ಪ್ರಮುಖ ಜಲಾಶಯಗಳು ಹಾಗೂ ಕೆರೆ ಕಟ್ಟೆಗಳು ಬರಿದಾಗಿದ್ದು, ಇದರಿಂದ ಕಬ್ಬು, ಹಿಪ್ಪು ನೇರಳೆ, ರಾಗಿ, ತೆಂಗು ಹಾಗೂ ಬಾಳೆ ಸೇರಿದಂತೆ ಇತರ ಫಸಲುಗಳು ನೀರಿಲ್ಲದೆ ಒಣಗುತ್ತಿವೆ ಎಂದರು.
ಈಗಾಗಲೇ ರೈತರು ಮುಂಗಾರು ಕೃಷಿ ಪ್ರಾರಂಭಿಸಬೇಕಿತ್ತು. ಮಳೆಯ ಮತ್ತು ನೀರಿನ ಅಭಾವದಿಂದ ಮುಂಗಾರು ಬಿತ್ತನೆಗೆ ತೊಡುಕುಂಟಾಗಿದೆ. ಆದ್ದರಿಂದ ತಾವು ಸರ್ಕಾರ ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಬರಪೀಡಿತ ಜಿಲ್ಲೆಯೆಂದು ಘೋಷಿಸಿ ರೈತರಿಗೆ ಪರಿಹಾರ ವಿತರಿಸುವಂತೆ ಸೂಚಿಸಬೇಕೆಂದು ಮನವಿ ಮಾಡಿದರು.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡಬೇಕಾದ 50 ರೂ. ಸಹಾಯಧನ ನೀಡಿಲ್ಲ ಜತೆಗೆ ಕಬ್ಬು ಅರೆಯಲು ಕಾರ್ಖಾನೆಗಳನ್ನು ಪ್ರಾರಂಭಿಸಲಿಲ್ಲ. ನೀರಿಲ್ಲದೆ ಬೆಳೆದು ನಿಂತ ಕಬ್ಬು ಒಣಗುತ್ತಿವೆ. ಜಿಲ್ಲಾಧಿಕಾರಿಗಳು ಕಾರ್ಖಾನೆಗಳಿಗೆ ಪತ್ರ ಬರೆದು ಕಾರ್ಖಾನೆಗಳನ್ನು ಸಕ್ಕರೆ ಆಯುಕ್ತರ ಅನುಮತಿ ಪಡೆದ ನಂತರ ಪ್ರಾರಂಭಿಸಿ ಎಂದು ಪತ್ರ ಬರೆದಿರುವುದು ಖಂಡನೀಯ. ತಾವು ಕೂಡಲೇ ಜಿಲ್ಲಾಧಿಕಾರಿಗಳು, ಕಾರ್ಖಾನೆಗಳ ಮಾಲೀಕರು ಮತ್ತು ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ ಅವ್ಯವಸ್ಥೆ ಸರಿಪಡಿಸುವಂತೆ ಕೋರಿದರು.
ವಳಗೆರೆಹಳ್ಳಿ ಗ್ರಾಮ ಮದ್ದೂರು ತಾಲೂಕಿಗೆ ಅತಿ ದೊಡ್ಡ ಗ್ರಾಮವಾಗಿದ್ದು, ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಲು ಸಮುದಾಯ ಭವನ ಇಲ್ಲದೆ ತೊಂದರೆಯಾಗುತ್ತಿದೆ. ಆದ್ದರಿಂದ ತಮ್ಮ ಅನುದಾನದಡಿ ಸಮುದಾಯ ಭವನ ನಿರ್ಮಿಸಬೇಕೆಂದು ಮನವಿ ಸಲ್ಲಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಉಪಾಧ್ಯಕ್ಷ ಎಂ.ವೀರಪ್ಪ, ಮುಖಂಡರಾದ ಸೋಂಪುರ ರಮೇಶ್, ಗುಂಡ ಮಹೇಶ್, ವೀರೇಶ್, ಬ್ಯಾಂಕ್ ನಾಗಣ್ಣ, ನಿರಂಜನ್, ಹರೀಶ್ ಇತರರು ಹಾಜರಿದ್ದರು.