ಉತ್ಪಾದನೆಯಲ್ಲಿ ಗೆದ್ದರೂ ಮಾರುಕಟ್ಟೆಯಲ್ಲಿ ಸೋಲು: ರೈತ ಮಾರುಕಟ್ಟೆ ಮೆಂಟರ್ ಯೋಗೀಶ್ ಅಪ್ಪಾಜಯ್ಯ ಹೇಳಿಕೆ

ಮಂಡ್ಯ ತಾಲೂಕು ಕ್ಯಾತುಂಗೆರೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರೈತ ಮಾರುಕಟ್ಟೆ ಮೆಂಟರ್ ಯೋಗೀಶ್ ಅಪ್ಪಾಜಯ್ಯ ಅವರನ್ನು ಸನ್ಮಾನಿಸಲಾಯಿತು.
ಮಂಡ್ಯ ತಾಲೂಕು ಕ್ಯಾತುಂಗೆರೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರೈತ ಮಾರುಕಟ್ಟೆ ಮೆಂಟರ್ ಯೋಗೀಶ್ ಅಪ್ಪಾಜಯ್ಯ ಅವರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕ್ಯಾತುಂಗೆರೆಯಲ್ಲಿ ರಾಯಭಾರಿಗಳ ದಿನ
  • ರೈತ ಬ್ರ್ಯಾಂಡ್‌ಗಳ(ಉತ್ಪನ್ನ) ನೇರ ಮಾರಾಟ ಅಭಿವೃದ್ಧಿ ವೇದಿಕೆ-ನೇಗಿಲ ಸೇನೆ ವತಿಯಿಂದ ಆಯೋಜನೆ
ಮಂಡ್ಯ: ರೈತ ಮತ್ತು ಕೃಷಿ ಐಸಿಯುನಲ್ಲಿದೆ. ಯುವಕರು ಹಳ್ಳಿಯಲ್ಲಿ ನಿಲ್ಲುತ್ತಿಲ್ಲ. ಕೃಷಿಯನ್ನು ಕಡೆಗಣಿಸಿದ್ದಾರೆ. ಪರಿಣಾಮ ಕೃಷಿ ಬದುಕು ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ರೈತನನ್ನು ಮಾರುಕಟ್ಟೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ರೈತ ಮಾರುಕಟ್ಟೆ ಮೆಂಟರ್ ಯೋಗೀಶ್ ಅಪ್ಪಾಜಯ್ಯ ತಿಳಿಸಿದರು.
ತಾಲೂಕಿನ ಕ್ಯಾತುಂಗೆರೆಯ ವಿಕಸನ ಜೋಗುಳ ದತ್ತು ಕೇಂದ್ರದಲ್ಲಿ ರೈತ ಬ್ರ್ಯಾಂಡ್‌ಗಳ(ಉತ್ಪನ್ನ) ನೇರ ಮಾರಾಟ ಅಭಿವೃದ್ಧಿ ವೇದಿಕೆ-ನೇಗಿಲ ಸೇನೆ ವತಿಯಿಂದ ಆಯೋಜಿಸಿದ್ದ ರೈತ ಬ್ರಾೃಂಡ್‌ಗಳ ರಾಯಭಾರಿಗಳ ದಿನ ಸಮಾರಂಭದಲ್ಲಿ ಮಾತನಾಡಿದ ಅವರು, ರೈತ ಉತ್ಪಾದನೆಯಲ್ಲಿ ಗೆಲ್ಲುತ್ತಿದ್ದಾನೆ. ಆದರೆ ಮಾರುಕಟ್ಟೆಯಲ್ಲಿ ಸೋಲುತ್ತಿದ್ದಾನೆ. ರೈತ ಗೆಲ್ಲಬೇಕು. ನನ್ನ ದೃಷ್ಟಿಯಲ್ಲಿ ರೈತನ ಬೆವರು ಬ್ರಾೃಂಡ್ ಆಗಬೇಕು. ಸಮಾಜದ ಪ್ರತಿ ನಾಗರಿಕ ರೈತ ಬ್ರ್ಯಾಂಡ್‌ಗಳ ರಾಯಭಾರಿ ಆಗಬೇಕು ಎಂದರು.
ನಮ್ಮ ಆಹಾರ ಪದ್ಧತಿ ಬದಲಾಗಿ ನಮ್ಮ ಮಾರುಕಟ್ಟೆಗೆ ನಾವೇ ಮುಳುವಾಗಿದ್ದೇವೆ. ಚಪಾತಿ ತಿನ್ನುವ ಮೂಲಕ ರಾಗಿ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ ನಮ್ಮ ರೈತರು ರಾಗಿಯನ್ನು ಬೆಳೆಯುವುದನ್ನು ಬಿಟ್ಟಿದ್ದಾರೆ. ನಾವೇಕೆ ಕಿರಾಣಿ ಅಂಗಡಿ ಹೋಗಬೇಕು?. ಮಾಲ್ಗಳಿಗೆ ಮಣಿಯಬೇಕು. ರೈತ ಉತ್ಪಾದಕ ಕಂಪನಿಗಳು, ಸ್ವಸಹಾಯ ಸಂಘಗಳು, ಸ್ತ್ರೀ ಶಕ್ತಿ ಸಂಘಗಳನ್ನು ಆಶ್ರಯ ತಾಣಗಳನ್ನಾಗಿ (ಸ್ಟಾಕ್ ಸೆಂಟರ್) ಮಾಡಿ. ಎಲ್ಲರೂ ರೈತ ರಾಯಭಾರಿಗಳಾಗಿ ಗ್ರಾಹಕರಾದರೆ ನೇರ ಮಾರುಕಟ್ಟೆ ರೂಪುಗೊಳ್ಳುತ್ತದೆ. ರೈತರ ಬೆಳೆಗಳಿಗೆ ಯೋಗ್ಯ ಬೆಲೆ ದೊರೆತಂತಾಗುತ್ತದೆ ಎಂದು ನೇಗಿಲಸೇನೆ ಮಾರುಕಟ್ಟೆ ಪರಿಕಲ್ಪನೆಯನ್ನು ವಿವರಿಸಿದರು.
ಮಂಡ್ಯ, ರಾಮನಗರ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ನೇಗಿಲ ಸೇನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿ ನಂತರ ರಾಜ್ಯ, ದೇಶದಾದ್ಯಂತ ಅನುಷ್ಠಾನಗೊಳಿಸಲಾಗುವುದು. ಇದು ರೈತರನ್ನು ಸ್ವಾವಲಂಬನೆಯನ್ನಾಗಿಸುವುದು. ರೈತ ಬ್ರಾೃಂಡ್‌ಗಳನ್ನು ಬಳಸಿ, ಉಳಿಸಿ ಬೆಳೆಸಿ ಎಂದು ಮನವಿ ಮಾಡಿದರು.
ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ರೈತನ ಪರಿಸ್ಥಿತಿ ಮೊದಲಿಗಿಂತ ಕೆಟ್ಟದ್ದಾಗಿದೆ. ಅವನ ಪರಿಸ್ಥಿತಿ ಯಾರಿಗೂ ಅರ್ಥವಾಗುತ್ತಿಲ್ಲ. ಅನಿವಾರ್ಯವಾಗಿ ತಮ್ಮದೇ ಬ್ರಾೃಂಡ್ ಸೃಷ್ಟಿಸಿಕೊಳ್ಳಬೇಕಿದೆ. ಜಿಲ್ಲೆಯಲ್ಲಿ 5 ಲಕ್ಷ 60 ಸಾವಿರ ರೈತರಿದ್ದಾರೆ. ವ್ಯವಸಾಯ ಅನಿವಾರ್ಯವಾಗಿ ಮಾಡಲೇಬೇಕಿದೆ. ಮುಂದಿನ ದಿನಗಳಲ್ಲಿ ಆಹಾರ ಬೆಲೆಯೂ ಜಾಸ್ತಿಯಾಗಲಿದೆ. ಹಾಗಾಗದಂತೆ ನೋಡಿ ಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಯೋಚಿಸುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ವಿಕಸನ ನಿರ್ದೇಶಕ ಮಹೇಶ್‌ಚಂದ್ರಗುರು ಮಾತನಾಡಿದರು. ಬೆಲ್ಲದ ನಾಡು ರೈತ ಉತ್ಪಾದಕರ ಕಂಪನಿಗಳ ಒಕ್ಕೂಟ ಅಧ್ಯಕ್ಷ ಕಾರಸವಾಡಿ ಮಹದೇವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ, ಡಾ.ಕೆ.ಎಂ.ಮಹೇಶ್, ಶಿವಕುಮಾರ್ ಕೊರಟಗೆರೆ, ದೇಸಿ ತಳಿ ಭತ್ತದ ಸಂರಕ್ಷಕ ಘನಿಖಾನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net