ವಿವಿಧ ಹುದ್ದೆ ನೇಮಕಾತಿಗೆ ಆಗ್ರಹ: ಎಐಡಿವೈಒ ಕಾರ್ಯಕರ್ತರ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಡ್ಯದಲ್ಲಿ ಎಐಡಿವೈಒನಿಂದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಡ್ಯದಲ್ಲಿ ಎಐಡಿವೈಒನಿಂದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
Published on
ಮಂಡ್ಯ: ವಿವಿಧ ಹುದ್ದೆಗಳ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಒ)ಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಂಘಟನೆ ಕಾರ್ಯಕರ್ತರು, ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ನಂತರ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ನಂತರ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಎಐಡಿವೈಒ ರಾಜ್ಯ ನಾಯಕ ಟಿ.ಆರ್.ಸುನಿಲ್ ಮಾತನಾಡಿ, ಉದ್ಯೋಗಾಕಾಂಕ್ಷಿಯರ ಸತತ ಹೋರಾಟಗಳ ಫಲವಾಗಿ ಕಳೆದ ಡಿಸೆಂಬರ್‌ನ ಚಳಿಗಾಲದ ಅಧಿವೇಶನದಲ್ಲಿ 56,432 ಹುದ್ದೆ ನೇಮಕಾತಿಗೆ ಅನುಮೋದನೆ ನೀಡಲಾಗಿತ್ತು. ಆದರೆ ಆರು ತಿಂಗಳಾದರೂ ಕೆಲವೇ ಹುದ್ದೆಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ವಿವಿಧ ನೆಪಗಳನ್ನು ನೀಡುತ್ತಾ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆ. ಇಲಾಖೆ ಸಚಿವರು ಅತೀ ಶೀಘ್ರದಲ್ಲಿ ನೇಮಕಾತಿ ಮಾಡುತ್ತೇವೆ ಎಂದು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವುದು ಉದ್ಯೋಗಾಕಾಂಕ್ಷಿಗಳಲ್ಲಿ ಭ್ರಮನಿರಸನ ಉಂಟುಮಾಡಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳು ಸರ್ಕಾರದ ಘೋಷಣೆಗಳನ್ನು ನಂಬದೆ, ವಿಶ್ವಾಸ ಕಳೆದುಕೊಂಡು ಮತ್ತೆ ಹೋರಾಟಕ್ಕಿಳಿಯಲಿದ್ದಾರೆ. ಆದ್ದರಿಂದ ರಾಜ್ಯಸರ್ಕಾರ ತಾನು ನುಡಿದಂತೆ 56,432 ಹುದ್ದೆಗಳಿಗೆ ಈ ಕೂಡಲೇ ಅಧಿಸೂಚನೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಪೊಲೀಸ್ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ದುಬಾರಿ ಪರೀಕ್ಷಾ ಶುಲ್ಕ ಅಂದರೆ 750 ರೂ ನಿಗದಿಗೊಳಿಸಲಾಗಿದೆ. ಈ ಮೊದಲು 400 ರೂ ಮಾತ್ರ ಇತ್ತು. ಏಕಾಏಕಿ ಪರೀಕ್ಷಾ ಶುಲ್ಕವನ್ನು ದುಪ್ಪಟ್ಟುಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಮತ್ತು ರಾಜ್ಯದ ಇತರ ಜಿಲ್ಲೆಗಳ ಹುದ್ದೆಗೆಂದು ಎರಡೂ ಕಡೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವೇ 1,500 ರೂ ಆಗುತ್ತದೆ. ಈಗಾಗಲೇ ನಿರುದ್ಯೋಗದಿಂದ ಬಳಲಿರುವ ಯುವಜನರಿಂದ ಅರ್ಜಿ ಶುಲ್ಕದ ಹೆಸರಿನಲ್ಲಿ ಈ ರೀತಿ ಹಣ ವಸೂಲಿ ಮಾಡುವುದು ಯಾವ ರೀತಿಯಿಂದಲೂ ಸೂಕ್ತವಲ್ಲ. ಆದ್ದರಿಂದ ಪೊಲೀಸ್ ನೇಮಕಾತಿ ಅರ್ಜಿ ಶುಲ್ಕವನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಒತ್ತಾಯಿಸಿದರು.
ಉದ್ಯೋಗಾಕಾಂಕ್ಷಿ ಹೋರಾಟ ಸಮಿತಿಯ ಅಭಿಷೇಕ್ ಮಾತನಾಡಿ, ಜಿಲ್ಲೆಯ ಸಾರ್ವಜನಿಕ ಗ್ರಂಥಾಲಯದ ನಿಯಮಿತ ಓದುಗರು ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದೇವೆ. ನಮ್ಮ ಗ್ರಂಥಾಲಯಕ್ಕೆ ಪ್ರತಿದಿನ ಅನೇಕ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಆಗಮಿಸುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಗುಣಮಟ್ಟದ ಪುಸ್ತಕಗಳ ಅಗತ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಸಲ್ಲಿಸಲಾದ ಪುಸ್ತಕ ಪಟ್ಟಿಯನ್ನು ಪರಿಗಣಿಸಿ, ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳಿಗೆ ಸೂಕ್ತ ಆದ್ಯತೆ ನೀಡಬೇಕು. ಅಲ್ಲದೆ, ಈಗಾಗಲೇ ನಿರ್ಮಾಣಗೊಂಡು ಒಂದು ವರ್ಷ ಕಳೆದಿರುವ ಹೊಸ ಗ್ರಂಥಾಲಯ ಕಟ್ಟಡವನ್ನು ಶೀಘ್ರವಾಗಿ ಸಾರ್ವಜನಿಕರ ಬಳಕೆಗೆ ತೆರೆಯುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಡಿವೈಒನ ಪೂರ್ಣಿಮಾ, ಉದ್ಯೋಗಾಕಾಂಕ್ಷಿ ಹೋರಾಟ ಸಮಿತಿಯ ಮಹದೇವಸ್ವಾಮಿ, ಚಂದ್ರಶೇಖರ್ ನಿತಿನ್, ಸಂಜಯ್‌ಗೌಡ, ನರಸಿಂಹ, ಪುನೀತ್, ಕಿಶೋರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net