ಮಂಡ್ಯ ಜಂಟಿ ಕೃಷಿ ನಿರ್ದೇಶಕ ಜಿ.ಎಸ್.ಜಯಸ್ವಾಮಿ ಮಾತನಾಡಿ, ರೈತರು ಕಬ್ಬು ಬೆಳೆಯಲು ಹನಿ ನೀರಾವರಿ ಬಳಸಿಕೊಳ್ಳಬೇಕು. ಉತ್ತಮ ಬಿತ್ತನೆ ಬೀಜ ಹಾಗೂ ಸಮರ್ಪಕವಾಗಿ ನೀರು ನಿರ್ವಹಣೆ ಮಾಡಬೇಕು. ಕಬ್ಬು ಬೆಳೆಯಲ್ಲಿ ಇಳುವರಿ ಹೆಚ್ಚಿಸಿಕೊಳ್ಳಬೇಕು. 100 ಟನ್ ಕಬ್ಬು ಬೆಳೆಯುವವರ ಕ್ಲಬ್ ಮಾಡಿಕೊಳ್ಳಬೇಕು. ಈ ಕ್ಲಬ್‌ನ ಬೆಳೆಗಾರರು ಪರಸ್ಪರ ಚರ್ಚೆ, ಸಂವಾದ ನಡೆಸಿಕೊಂಡು ಕಬ್ಬು ಅಭಿವೃದ್ಧಿ ಮಾಡಿ, 100 ರಿಂದ 120ರಷ್ಟು ಟನ್ ಕಬ್ಬು ಬೆಳೆಯುವಂತಾಗಬೇಕು. ಆ ಮೂಲಕ ಕಬ್ಬು ಬೆಳೆಗಾರರಿಗೆ ಮಾದರಿಯಾಗಬೇಕು ಎಂದು ಹೇಳಿದರು.