ಅನ್ಯಾಯದ ವಿರುದ್ಧ ಅಗ್ನಿಬನ್ನಿರಾಯರ ಹೋರಾಟ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ಅಗ್ನಿಬನ್ನಿರಾಯ ಜಯಂತಿ ಕಾರ್ಯಕ್ರಮವನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಉದ್ಘಾಟಿಸಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಅಗ್ನಿಬನ್ನಿರಾಯ ಜಯಂತಿ ಕಾರ್ಯಕ್ರಮವನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆ
  • ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕಾರ್ಯಕ್ರಮ
ಮಂಡ್ಯ: ಮನುಕುಲದ ರಕ್ಷಣೆಗಾಗಿ ಅವತರಿಸಿ ಅನ್ಯಾಯದ ವಿರುದ್ಧ ಹೋರಾಡಿದ ಅಗ್ನಿಬನ್ನಿರಾಯರ ವಂಶಸ್ಥರು ಅಗತ್ಯ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ತಿಳಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಅಗ್ನಿಬನ್ನಿರಾಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಗ್ನಿಬನ್ನಿರಾಯರ ಅವತಾರ ಮತ್ತು ಅವರ ಹೋರಾಟಗಳು ಅವಿಸ್ಮರಣೀಯವಾದವು. ಅವರ ಬಗ್ಗೆ ತಿಳಿದುಕೊಳ್ಳುವುದೇ ವಿಶೇಷವಾದದ್ದು. ಅವರ ಧ್ಯೇಯೋದ್ದೇಶಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವುದು ಅಗತ್ಯವಾಗಿದೆ ಎಂದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಮಾನವ ಕಲ್ಯಾಣ ಮತ್ತು ರಕ್ಷಣೆಯಂತಹ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿರುವ ಅಗ್ನಿವಂಶ ಕ್ಷತ್ರಿಯ ಕುಲದವರು ಇಂದು ಸಮಾಜದ ರಕ್ಷಣೆ ಜತೆಗೆ ತಮ್ಮ ಉಳಿವಿಗಾಗಿಯೂ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ತಿಗಳ ಸಮುದಾಯ ಹೋರಾಟದ ಹಿನ್ನೆಲೆಯನ್ನು ಹೊಂದಿರುವುದರಿಂದ ರಾಜಕೀಯ ಮಾನ್ಯತೆ, ಸಾಮಾಜಿಕ ಸಮಾನತೆ ಹಾಗೂ ಆರ್ಥಿಕ ಬಲವರ್ಧನೆಗಾಗಿ ಹೋರಾಟ ಮಾಡಬೇಕು. ತಮ್ಮ ಹಕ್ಕುಗಳನ್ನು ಪಡೆದುಕೊಂಡು ತಮ್ಮ ಮಕ್ಕಳನ್ನು ಉನ್ನತ ಹುದ್ದೆಗೆ ಅಲಂಕರಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪ್ರವರ್ಗ 1ಎನಲ್ಲಿ ಬರುವ ತಿಗಳ ಮತ್ತು ಇತರೆ ಉಪ ಜಾತಿಗಳು ಎಂದಿಗೂ ಧೃತಿಗೆಡಬಾರದು. ತಮ್ಮ ಜತೆ 200ಕ್ಕೂ ಹೆಚ್ಚು ಸಮುದಾಯಗಳು ಇದ್ದಾವೆ ಎಂಬ ಭಾವನೆಯಿಂದ ಮುಂದುವರಿಯಬೇಕು. ಪ್ರವರ್ಗ 1ಎ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ 10ರವರೆಗೆ ಏರಿಸಿದರೆ ಎಲ್ಲ ಸೌಲಭ್ಯಗಳು ಸಿಗುತ್ತವೆ ಎಂದು ತಿಳಿಸಿದರು.
ಹವ್ಯಾಸಿ ಇತಿಹಾಸಕಾರ ಮಧುಸೂಧನ್ ಮಾತನಾಡಿ, ಅಗ್ನಿಬನ್ನಿರಾಯ ಕುಲಬಾಂಧವರು ಶಿಕ್ಷಣಕ್ಕೆ ಒತ್ತು ನೀಡಬೇಕು. ತಮ್ಮ ಸಮುದಾಯ ರಾಜಕೀಯವಾಗಿ ನಿರೀಕ್ಷಿತ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗದಿರುವುದರಿಂದ ಆ ನಿಟ್ಟಿನಲ್ಲಿ ಗಂಭೀರ ಪ್ರಯತ್ನವನ್ನು ಮಾಡಬೇಕು. ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಇರುವ ತಿಗಳ ಮತ್ತು ಅದರ ಉಪಜಾತಿ ಸಮುದಾಯಗಳ ಸ್ಥಿತಿಗತಿಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಜಿ.ವಿ.ನಂದೀಶ್, ತಿಗಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುಮೂರ್ತಿ, ಪ್ರಧಾನ ಕಾರ್ಯದರ್ಶಿ ಅಕ್ಕಿಹೆಬ್ಬಾಳು ವಾಸು, ಮುಖಂಡರಾದ ನಾಗರತ್ನಾ, ಎಂ.ಬಿ.ರಮೇಶ್ ಇತರರಿದ್ದರು. ಸಮಾರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ಕಲಾಮಂದಿರದವರೆಗೆ ಜಾನಪದ ಕಲಾತಂಡಗಳೊಂದಿಗೆ ಅಗ್ನಿಬನ್ನಿರಾಯ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net