ನಗರದ ಮದ್ದೂರು ಕ್ರೀಡಾ ಬಳಗದಲ್ಲಿ ಬುಧವಾರ ಮದ್ದೂರು ತಾಲೂಕು ನಾಗರಿಕ ವೇದಿಕೆ ವತಿಯಿಂದ ಕೃಷಿ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭದಲ್ಲಿ ಪ್ರೊ.ಎಂ.ಸಿ.ಬೋರೇಗೌಡ, ಟಿ.ನಾರಾಯಣ ಹಾಗೂ ಸಿ.ಎಸ್.ಶಶಿಕಲಾ ಅವರಿಗೆ ಕೃಷಿ ಪ್ರಶಸ್ತಿ ನೀಡಿ ಅಭಿನಂದಿಸಿ ಗೌರವಿಸಲಾಯಿತು. ಪ್ರೊ.ಕೆ.ಸಿ.ನಾರಾಯಣಸ್ವಾಮಿ, ಪ್ರೊ.ಕೆ.ಎನ್.ನಿಂಗೇಗೌಡ, ಡಾ.ಎಚ್.ಆರ್.ಅರುಣ್‌ಕುಮಾರ್, ವಿ.ಎಸ್.ಅಶೋಕ್, ಮುನೇಗೌಡ, ಬೋರೇಗೌಡ, ವಿ.ಕೆ.ಜಗದೀಶ್, ವಿಜೇಂದ್ರ ಇದ್ದರು.
ಮದ್ದೂರು : ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸಮಗ್ರ ಕೃಷಿ ಮಾಡುವುದರಿಂದ ರೈತರು ಆರ್ಥಿಕವಾಗಿ ಸದೃಢರಾಗಬಹುದು ಎಂದು ವಿ.ಸಿ.ಫಾರ್ಮ್‌ನ ಕೃಷಿ ವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ನಾರಾಯಣಸ್ವಾಮಿ ಹೇಳಿದರು.
ನಗರದ ಮದ್ದೂರು ಕ್ರೀಡಾ ಬಳಗದಲ್ಲಿ ಬುಧವಾರ ಮದ್ದೂರು ತಾಲೂಕು ನಾಗರಿಕ ವೇದಿಕೆ ವತಿಯಿಂದ ಕೃಷಿ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಗ್ರ ಕೃಷಿ ಮಾಡುವುದರಿಂದ ಒಂದಲ್ಲ ಒಂದು ಬೆಳೆಯಿಂದ ಲಾಭ ಪಡೆದುಕೊಳ್ಳಬಹುದು. ಒಂದೇ ಬೆಳೆಯನ್ನು ನಂಬಿಕೊಳ್ಳದೆ ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸಮಗ್ರ ಕೃಷಿಯನ್ನು ಮಾಡುವುದರಿಂದ ಕೈ ತುಂಬ ಆದಾಯ ಗಳಿಸಬಹುದು ಎಂದರು.
ರೈತರು ಕಡಿಮೆ ನೀರು ಬಳಕೆ ಮಾಡಬೇಕು ಹಾಗೂ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡದೆ ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಭೂಮಿ ಫಲವತ್ತತೆ ಹೆಚ್ಚುವ ಜತೆಗೆ ಹೆಚ್ಚಿನ ಇಳುವಳಿ ಗಳಿಸಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಬೆಳೆಗಳಿಗೆ ರೋಗ, ಕೀಟಬಾಧೆ ಕಾಣಿಸಿಕೊಂಡ ಸಂದರ್ಭದಲ್ಲಿ ರೈತರು ಆತಂಕಕ್ಕೆ ಒಳಗಾಗದೆ ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಅಧಿಕಾರಿಗಳ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಂಡರೆ ರೋಗ ಹಾಗೂ ಕೀಟಬಾಧೆ ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಸಚಿವ ಪ್ರೊ.ಕೆ.ಎನ್.ನಿಂಗೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮದ್ದೂರು ತಾಲೂಕು ನಾಗರಿಕ ವೇದಿಕೆ ಕೃಷಿಯಲ್ಲಿ ಸಾಧನೆ ಮಾಡಿದ ರೈತರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಪ್ರಶಂಸನೀಯ. ಇದರಿಂದ ಕೃಷಿಯ ಬಗ್ಗೆ ಪ್ರತಿಯೊಬ್ಬರಲ್ಲೂ ಹೆಮ್ಮೆ ಮೂಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ಎಂ.ಸಿ.ಬೋರೇಗೌಡ, ಟಿ.ನಾರಾಯಣ ಹಾಗೂ ಸಿ.ಎಸ್.ಶಶಿಕಲಾ ಅವರಿಗೆ ಕೃಷಿ ಪ್ರಶಸ್ತಿ ನೀಡಿ ಅಭಿನಂದಿಸಿ ಗೌರವಿಸಲಾಯಿತು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ ಡಾ.ಎಚ್.ಆರ್.ಅರುಣ್‌ಕುಮಾರ್, ಜಿಲ್ಲಾ ಜಿಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಉಪ ನಿರ್ದೇಶಕ ಮುನೇಗೌಡ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಬೋರೇಗೌಡ, ಮದ್ದೂರು ಕ್ರೀಡಾ ಬಳಗದ ಅಧ್ಯಕ್ಷ ವಿ.ಕೆ.ಜಗದೀಶ್, ಉದ್ಯಮಿ ಬಿ.ವಿಜೇಂದ್ರ, ನಿವೃತ್ತ ಪ್ರಾಂಶುಪಾಲರಾದ ಯದುಶೈಲ ಸಂಪತ್ ಸೇರಿದಂತೆ ಇತರರು ಇದ್ದರು.