ಪ್ರತಿ ಹಳ್ಳಿಗೂ ಸಮರ್ಪಕ ಮೂಲ ಸೌಕರ್ಯ

ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ 12.75 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ದಿನೇಶ್‌ಗೂಳಿಗೌಡ, ದೊಡ್ಡ ಗೂಳೀಗೌಡ, ಪುಟ್ಟಸ್ವಾಮಿ, ಗೂಳೀಗೌಡ, ಅಪ್ಪಾಜಣ್ಣ, ಅಡ್ಡರಸ್ತೆ ಗೋಪಿ, ಮಾರಸಿಂಗನಹಳ್ಳಿ ರಾಮಚಂದ್ರ, ಶರತ್, ಗೋವಿಂದ್ ಇದ್ದರು.
ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ 12.75 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ದಿನೇಶ್‌ಗೂಳಿಗೌಡ, ದೊಡ್ಡ ಗೂಳೀಗೌಡ, ಪುಟ್ಟಸ್ವಾಮಿ, ಗೂಳೀಗೌಡ, ಅಪ್ಪಾಜಣ್ಣ, ಅಡ್ಡರಸ್ತೆ ಗೋಪಿ, ಮಾರಸಿಂಗನಹಳ್ಳಿ ರಾಮಚಂದ್ರ, ಶರತ್, ಗೋವಿಂದ್ ಇದ್ದರು.
Published on
ಮದ್ದೂರು: ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಸಮರ್ಪಕವಾಗಿ ಮೂಲ ಸೌಕರ್ಯ ಕಲ್ಪಿಸುವ ಮೂಲಕ ರಾಜ್ಯಕ್ಕೆ ಮಾದರಿ ತಾಲೂಕನ್ನಾಗಿ ಮಾಡುವುದು ನನ್ನ ಗುರಿ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಬುಧವಾರ 12.75 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷಗಳು ತುಂಬಿದ್ದು, ಈ ಅವಧಿಯಲ್ಲಿ ಕ್ಷೇತ್ರದ ಜನರ ನಿರೀಕ್ಷೆಗೂ ಮೀರಿ 2 ಸಾವಿರ ಕೋಟಿ ರೂ. ಗೂ ಹೆಚ್ಚಿನ ಅನುದಾನದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಸಂತಸ ವ್ಯಕ್ತಪಡಿಸಿದರು.
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬೇಡಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾನು ಅನುದಾನ ಕೇಳಿದಾಗಲೆಲ್ಲ ಬಿಡುಗಡೆ ಮಾಡಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿಶೇಷವಾಗಿ ಕ್ಷೇತ್ರದ ನೀರಾವರಿ ಯೋಜನೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು 1,500 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಈಗಾಗಲೇ 800 ಕೋಟಿ ರೂ.ಗೂ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ಮುಂದಿನ ಒಂದು ತಿಂಗಳಲ್ಲಿ ಮಂಡಳಿಯ ಸಭೆಯಲ್ಲಿ ಇನ್ನು 500 ಕೋಟಿ ರೂ. ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು.
ಈಗಾಗಲೇ ಕ್ಷೇತ್ರದಲ್ಲಿ ರೈತರ ಬಹು ವರ್ಷಗಳ ಸಮಸ್ಯೆಗಳಾಗಿದ್ದ ಸೂಳೆಕೆರೆ, ಅಚ್ಚುಕಟ್ಟು, ಮದ್ದೂರು ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ನಾಲೆಗಳ ಆಧುನೀಕರಣದ ಜತೆಗೆ ಕೆರೆಗಳ ಪುನಶ್ಚೇತನ ಕಾಮಗಾರಿಯೂ ಭರದಿಂದ ಸಾಗುತ್ತಿದೆ. ಇದರ ಜತೆಗೆ ಶಿಂಷಾ ನದಿಯ ಬಲ ಮತ್ತು ಎಡದಂಡೆ ನಾಲೆಗಳ ಆಧುನೀಕರಣಕ್ಕೂ ಚಾಲನೆ ನೀಡಲಾಗುತ್ತಿದೆ. ಶಿಂಷಾ ನದಿಯ ಏತನೀರಾವರಿ ಯೋಜನೆಗಳಲ್ಲಿ ಯಂತ್ರಗಳು ಶಿಥಿಲಗೊಂಡಿದ್ದು, ಅವುಗಳನ್ನು ಹೊಸ ತಂತ್ರಜ್ಞಾನದ ಯಂತ್ರೋಪಕರಣಗಳನ್ನು 130 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗುತ್ತಿದೆ. ಜತೆಗೆ ಬನ್ನಹಳ್ಳಿ ಏತ ನೀರಾವರಿ ಯೋಜನೆಯೂ ಎರಡು ಮೂರು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಮೂಲಕ ರೈತರ ಬೇಸಾಯಕ್ಕೆ ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಮಂಡ್ಯದಿಂದ ಚಂದೂಪುರವರೆಗೂ 25 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಮಾಡುವ ಜತೆಗೆ ಸಿಎ ಕೆರೆ ಹೋಬಳಿಯ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಗಳ ಅಭಿವೃದ್ಧಿಗೆ  ಸಚಿವರಿಗೆ 17 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಷ್ಟೆ ಅಲ್ಲದೆ ಮದ್ದೂರು ನಗರದಲ್ಲಿ ಮಾಂಸ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ನೂತನ ನಗರಸಭಾ ಕಚೇರಿ ಕಟ್ಟಡಕ್ಕೆ 10 ಕೋಟಿ ರೂ., ತಾಲೂಕು ಪಂಚಾಯಿತಿ ನೂತನ ಕಟ್ಟಡಕ್ಕೆ 4.5 ಕೋಟಿ ರೂ., ತಾಲೂಕು ನ್ಯಾಯಾಲಯ ಸಂಕೀರ್ಣಕ್ಕೆ 30 ಕೋಟಿ ರೂ., ತಾಲೂಕು ಆಸ್ಪತ್ರೆ ಉನ್ನತೀಕರಣಕ್ಕೆ 30 ಕೋಟಿ ರೂ. ಹಾಗೂ ನಗರದ ಪ್ರವಾಸಿ ಮಂದಿರದಿಂದ ಕೊಲ್ಲಿ ವೃತ್ತದವರೆಗೆ 80 ಅಡಿಗಳ ರಸ್ತೆ ವಿಸ್ತರಣೆಗೆ 150 ಕೋಟಿ ರೂ. ಅನುದಾನ ಕ್ಕೆೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ. ನಗರಸಭಾ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ನಗರದ ರೀತಿಯಲ್ಲೇ ಅಭಿವೃದ್ಧಿಪಡಿಸಿ ರಾಜ್ಯದಲ್ಲಿಯೇ ಮಾದರಿ ತಾಲೂಕನ್ನಾಗಿ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು 2 ಸಾವಿರ ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿರುವುದು ಶ್ಲಾಘನೀಯ. ಶಾಸಕ ಕೆ.ಎಂ.ಉದಯ್ ತವರು ಗ್ರಾಮ ಕದಲೂರು ಹಾಗೂ ತಾಯಿಯ ಗ್ರಾಮವಾದ ಮಾರಸಿಂಗನಹಳ್ಳಿ ಗ್ರಾಮಗಳನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.
ನನ್ನ ಸ್ವ ಗ್ರಾಮವಾದ ಮಾರಸಿಂಗನಹಳ್ಳಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ನಾನು ಮತ್ತು ಶಾಸಕ ಕೆ.ಎಂ.ಉದಯ್ ಅವರ ಶ್ರಮದಿಂದ 12.75 ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ತಂದು ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲಾಯಿತು.
ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮುಖಂಡರಾದ ಕೆ.ಎಂ.ರವಿ, ದೊಡ್ಡ ಗೂಳೀಗೌಡ, ಪುಟ್ಟಸ್ವಾಮಿ, ಗೂಳೀಗೌಡ, ಅಪ್ಪಾಜಣ್ಣ, ಅಡ್ಡರಸ್ತೆ ಗೋಪಿ, ಮಾರಸಿಂಗನಹಳ್ಳಿ ರಾಮಚಂದ್ರ, ಶರತ್, ಗೋವಿಂದ್, ಪ್ರಕಾಶ್, ವಿಜಿ, ಕಿರಣ್, ನವೀನ್, ರಾಘವೇಂದ್ರ, ಶಿವನಂಜಪ್ಪ, ರಾಜಶೇಖರ್, ಕಾವೇರಿ ನೀರಾವರಿ ನಿಗಮದ ಎಇಇ ನಾಗರಾಜ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net